ಭಾರತೀಯ ಶಾಸನಗಳು 

ಸಾಮಾನ್ಯವಾಗಿ ಶಾಸನಗಳು ಎಂದರೆ ಆಜ್ಞೆ, ವಿಶೇಷವಾಗಿ ರಾಜಾಜ್ಞೆ ಎಂದು ತಿಳಿಯಲಾಗುತ್ತದೆ. ಈಗಲೂ ಶಾಸಕ ಎಂದರೆ ಶಾಸನಗಳ ರಚನೆಗೆ ಕಾರಣನಾದವನು ಎಂದೂ, ಶಾಸನ ಸಭೆ ಎಂದರೆ, ಆಜ್ಞೆಗಳನ್ನು ರೂಪಿಸುವ ಸಭೆ ಎಂದೂ ತಿಳಿಯಲಾಗಿದೆ. ಒಟ್ಟಾರೆ ಶಾಸನ ಎಂದರೆ ಯಾವುದೇ ಆಜ್ಞೆ ಎಂದೇ ತಿಳಿಯಬೇಕಾಗುತ್ತದೆ. ಶಾಸನ ಶಬ್ದದ ಮೂಲವೇ ಶಾಸ್. ಎಂದರೆ ಆಜ್ಞೆ, ಆಜ್ಞೆ ಮಾಡು ಎಂದೇ ಅರ್ಥ. ಆದ್ದರಿಂದಲೇ ಸಾಮಾನ್ಯವಾಗಿ ಶಾಸನ ಎಂದರೆ, ಮೊದಲು ಹೇಳಿದ ಅರ್ಥವನ್ನೇ ಹೇಳಲಾಗುತ್ತದೆ. ಕೌಟಿಲ್ಯನೂ ಸಹ ರಾಜನ ಆಜ್ಞೆಗಳನ್ನು ತಿಳಿಸುವ ಬರಹವೇ ಶಾಸನ ಎಂದು ವ್ಯಾಖ್ಯಾನಿಸಿದ್ದಾನೆ. ಆದರೆ, ಶಾಸನದ ಅರ್ಥವು ಅಷ್ಟಕ್ಕೇ ನಿಲ್ಲುವುದಿಲ್ಲ. ಕಳೆದ ಕಾಲದ, ವಿಶೇಷವಾಗಿ ಪ್ರಾಚೀನ ಭಾರತದ ಸಮಗ್ರ, ಎಂದರೆ ರಾಜಕೀಯವೂ ಸೇರಿದಂತೆ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಇತ್ಯಾದಿ ಎಲ್ಲವೂ ಸೇರಿದ ಸಮಗ್ರ ಇತಿಹಾಸದ ರಚನೆಗೆ ಸಹಾಯವಾಗುವ ಬರವಣಿಗೆಗಳೆಲ್ಲವನ್ನೂ ಶಾಸನ ಎನ್ನಬಹದು. ಇದರಲ್ಲಿ ಕಲ್ಲಿನ ಮೇಲಾಗಲೀ, ಯಾವುದೇ ಲೋಹದ ಮೇಲ್ಮೈನ ಮೇಲಾಗಲೀ ಕೊರೆದ ಬರಹಗಳೂ ಸೇರುತ್ತವೆ. ಇಂತಹ ಬರಹಗಳು ಕೇವಲ ಆಜ್ಞೆಗಳು ಮಾತ್ರ ಆಗಿರುವುದಿಲ್ಲ ಎಂದು ಇತಿಹಾಸವನ್ನು ಅಧ್ಯಯನ ಮಾಡುವ ಎಲ್ಲರಿಗೂ ತಿಳಿದಿದೆ. ವಿಶೇಷವಾಗಿ ಶಾಸನಗಳನ್ನು ಅಧ್ಯಯನ ಮಾಡಿರುವ ಮತ್ತು ಮಾಡುವ ಎಲ್ಲರಿಗೂ ಶಾಸನಗಳು ಯಾವುದೇ ಆಜ್ಞೆಯನ್ನು ಮಾತ್ರ ದಾಖಲಿಸದೆ, ವೀರನ ಅಥವಾ ವೀರರ ಸಾವು, ಮಹಾಸತಿಯಾದ ಹೆಣ್ಣು ಅಥವಾ ಹೆಣ್ಣುಗಳ ಅನುಪಮ ತ್ಯಾಗ ಮತ್ತು ನಿಷ್ಠೆ, ದೇವಾಲಯಗಳ ನಿರ್ಮಾಣ, ದಾನ - ದತ್ತಿಗಳ ಕೊಡುಗೆ ಇತ್ಯಾದಿ ಬದುಕಿಗೆ ಸಂಬಂಧಿಸಿದ ಅನೇಕ ವಿವರಗಳನ್ನು ದಾಖಲಿಸುತ್ತವೆ. ಈ ಹಿನ್ನೆಲೆಯಲ್ಲಿ ಶಾಸನ ಎಂದರೆ, ಸುಲಭವಾಗಿ ನಶಿಸದ, ಘಟ್ಟಿಯಾದ ವಸ್ತುವಿನ ಮೇಲೆ ಕೊರೆದ ಬರಹ ಎಂದು ವ್ಯಾಖ್ಯಾನಿಸಲಾಗಿದೆ. 

ಭಾರತೀಯರ ಇತಿಹಾಸ ಪ್ರಜ್ಞೆಯ ಬಗ್ಗೆ ಹಲವಾರು ಆರೋಪಗಳಿವೆ. ಭಾರತದಲ್ಲಿ ಕೆಲವು ಘಟನೆಗಳೇನೋ ಇವೆ. ಆದರೆ ಅವು ಯಾವುವೂ ಚರಿತ್ರೆಯಲ್ಲ ಎಂದು ಭಾವಿಸಲಾಗಿದೆ.  ಮುಸ್ಲಿಂ ಅವಧಿಯ ತನಕ, ಭಾರತದ ಯಾವುದೇ ರಾಷ್ಟ್ರೀಯ ವಿದ್ಯಮಾನಗಳ ಸುಸಂಬದ್ಧ ನಿರೂಪಣೆ ಅಸಾಧ್ಯಎನ್ನುವ ಮಾತು ಎಲ್ಫಿನ್‍ಸ್ಟನ್‍ನದು. ಪ್ರಾಚೀನ ಹಿಂದೂಗಳಿಗೆ ಎಂದಾದರೂ ಐತಿಹಾಸಿಕ ಪ್ರಜ್ಞೆ ಇತ್ತೆ ಎಂಬ ಅನುಮನ ಜೆ.ಎಫ್.ಫ್ಲೀಟ್‍ರನ್ನು ಕಾಡಿದೆ. ಹೀಗೆ ಭಾರತೀಯರ ಐತಿಹಾಸಿಕ ಪ್ರಜ್ಞೆಯ ಬಗ್ಗೆಯೇ ಅನುಮಾನಗಳಿದ್ದವು. ಭಾರತೀಯರು ಇತಿಹಾಸದ ಬದಲು ಕಥೆ ಹೇಳುತ್ತಾರೆ ಎಂಬ ಮಾತೂ ಇತ್ತು. ಆದರೆ, ಈ ಹೇಳಿಕೆಗಳೆಲ್ಲವೂ ಪೂರ್ವಾಗ್ರಹಪೀಡಿತ ಎಂದು ಈಚಿನ ದಿನಗಳಲ್ಲಿ ಖಚಿತವಾಗಿದೆ. ಹಿಂದೂಗಳ ಬರವಣಿಗೆಯಲ್ಲಿ ಧರ್ಮ, ಅರ್ಥ, ಕಾಮ ಮೋಕ್ಷಗಳಿಗೆ ಸಂಬಂಧಿಸಿದ ತತ್ವ ಮತ್ತು ದರ್ಶನಗಳಿಗೇ ಹೆಚ್ಚಿನ ಆದ್ಯತೆ ಇರುವುದರಿಂದ ಐಹಿಕವಾದ ಏಳು-ಬೀಳು. ಸೋಲು-ಗೆಲುವು, ಅಧಿಕಾರ ಗಳಿಕೆ, ಅಧಿಕಾರ ನಷ್ಟ, ಇತ್ಯಾದಿಗಳು ದಾಖಲೆಯಿಂದ ಹಿಂದೆ ಉಳಿದವು. ಅದರಿಂದ ಸಮಗ್ರ ಇತಿಹಾಸಕ್ಕೆ ನಷ್ಟವಾಗಿದೆ ಎಂಬ ಮಾತು ನಿಜ. 

ವಂಶಾವಳಿಗಳು ಮತ್ತು ಇತಿವೃತ್ತಗಳು, ಪುರಾಣಗಳು, ಶಾಸನಗಳಂತಹ ಅಧಿಕೃತ ದಾಖಲೆಗಳು, ಚಾರಿತ್ರಿಕ ಕಾವ್ಯಗಳು ಚರಿತ್ರೆಯ ಅಧ್ಯಯನಕ್ಕೆ ಅವಶ್ಯಕವಾದ ಮಾಹಿತಿಗಳನ್ನು ಒದಗಿಸುತ್ತವೆ. ಇವುಗಳ ಪೈಕಿ, ವಂಶಾವಳಿಗಳು, ಇತಿವೃತ್ತಗಳು, ಪುರಾಣಗಳು ಮತ್ತು ಚಾರಿತ್ರಿಕ ಕಾವ್ಯಗಳು ಸೃಜನಾತ್ಮಕ ವರ್ಗಕ್ಕೆ ಸೇರುವ ಮತ್ತು ಸಮಕಾಲೀನವಲ್ಲದ ಬರವಣಿಗೆಗಳಾಗಿರುವುದರಿಂದ ಖಚಿತವಾದ ಇತಿಹಾಸವನ್ನು ಅವುಗಳಿಂದ ನಿರೀಕ್ಷಿಸಲಾಗುವುದಿಲ್ಲ. ಇತಿಹಾಸ ರಚನೆಗೆ ಪೂರಕವಾಗುವ ಮಾಹಿತಿಗಳನ್ನು ಸಂಶೋಧಕನಾದವನು ಹುಡುಕಿ ಪ್ರತ್ಯೇಕಿಸಬೇಕಾಗುತ್ತದೆ. ಮೇಲೆ ಪ್ರಸ್ತಾಪಿಸಿದ ವಂಶಾವಳಿ, ಇತಿವೃತ್ತ, ಪುರಾಣ, ಚಾರಿತ್ರಿಕ ಕಾವ್ಯಗಳು ಮೂಲದಲ್ಲಿ ಅಥವಾ ಪ್ರತಿಗಳಾಗಿ ತಾಳೆಯೋಲೆಗಳ ಮೇಲೆ ಬರಹದ ರೂಪದಲ್ಲಿ ದೊರೆಯುತ್ತವೆ. ತಾಳ ಪತ್ರ, ಭೂರ್ಜ ಪತ್ರ, ಸಾಚಿ, ಬಟ್ಟೆ, ಚರ್ಮ, ಮಣ್ಣು ಮತ್ತು ಕಾಗದಗಳನ್ನು ಮೇಲೆ ತಿಳಿಸಿದ ಸ್ವರೂಪದ ಬರವಣಿಗೆಗಳಿಗೆ ಮಾತ್ರವೇ ಅಲ್ಲದೆ, ಶಾಸನಗಳನ್ನು ಬರೆಯಲೂ ಸಹ ಉಪಯೋಗಿಸಿರುವ ಸಾಧ್ಯತೆಗಳಿವೆಯಾದÀರೂ, ಅವು ದೀರ್ಘ ಕಾಲ ಉಳಿಯುವ ಗುಣವನ್ನು ಪಡೆದಿಲ್ಲವಾದ ಕಾರಣ, ನಶಿಸಿರುವ ಸಾಧ್ಯತೆಗಳೇ ಹೆಚ್ಚು. ಶಾಸನಗಳನ್ನು ರಾಜಾಸ್ಥಾನಗಳಲ್ಲಿ ಮೂಲ ಪ್ರತಿಯಾಗಿ ಮತ್ತು ದಾನ ಪಡೆದವನಿಗೆ ಒಂದು ಪ್ರತಿಯಾಗಿ ತಾಳ ಪತ್ರ ಅಥವಾ ಮತ್ತಾವುದೇ ವಸ್ತುವಿನ ಮೇಲೆ ಬರೆದು ನೀಡುತ್ತಿದ್ದ ಪದ್ಧತಿ ಇತ್ತು ಎಂದು ತಿಳಿಯಲಾಗಿದೆ. ರಾಜ ಶಾಸನಗಳನ್ನು ತಾಡ (ತಾಳ) ಪತ್ರ, ಭೂರ್ಜ ಪತ್ರ, ಬಟ್ಟೆ, ಚರ್ಮ ಹಾಗೂ ಕಾಗದದ ಮೇಲೆ ಬರೆಸಿಕೊಡಲಾಗುತ್ತಿತ್ತು ಎಂದು ನಂತರದ ಕಾಲದ ಕೆಲವು ಶಾಸನಗಳಿಂದಲೇ ತಿಳಿದುಬರುತ್ತದೆ. ಸಾಮಾನ್ಯವಾಗಿ ಇವುಗಳನ್ನು ಮಸಿಯಿಂದ ಬರೆಸಿ ಅಥವಾ ಸೂಜಿಯಿಂದ ಕೊರೆಸಿ ಕೊಡಲಾಗುತ್ತಿತ್ತು. ದಾಖಲೆಯು ಒಂದು ಹಾಳೆಗಿಂತ ಹೆಚ್ಚಾಗಿದ್ದ ಸಂದರ್ಭದಲ್ಲಿ ಎಲ್ಲ ಹಾಳೆಗಳನ್ನೂ ಸೇರಿಸಿ, ಮಧ್ಯದಲ್ಲಿ ಅಥವಾ ಅಂಚಿನಲ್ಲಿ ಒಂದು ರಂಧ್ರವನ್ನು ಕೊರೆದು, ದಾರದಿಂದ ಪೋಣಿಸಿ ಕೊಡಲಾಗುತ್ತಿತ್ತು. ಅಲೆಗ್ಸಾಂಡರನ ದಂಡಯಾತ್ರೆಯ ಕಾಲದಲ್ಲಿ ಭೂರ್ಜ ಪತ್ರಗಳ ಬಳಕೆ ಇತ್ತೆಂದು ತಿಳಿದಿದೆ. ಹತ್ತಿ ಬಟ್ಟೆಯನ್ನು ನಿರ್ದಿಷ್ಟ ಅಳತೆಗೆ ಕತ್ತರಿಸಿ, ಅದಕ್ಕೆ ಅಕ್ಕಿ, ಹುಣಿಸೆಬೀಜ ಅಥವಾ ಗೋಧಿ ಹಿಟ್ಟಿನ ಗಂಜಿ ಸವರಿ, ನಯಗೊಳಿಸಿ ಬರೆಯಲೆಂದೇ ವಿಶಿಷ್ಟವಾಗಿ ತಯಾರಿಸುತ್ತಿದ್ದ ಕಡತಗಳ ಮೇಲೂ ಲೆಕ್ಕ - ಪತ್ರಗಳ ದಾಖಲೆಗಳನ್ನಿಡುತ್ತಿದ್ದ ಮತ್ತು ದಾನ, ದತ್ತಿಗಳನ್ನು ದಾಖಲಿಸಿ ನೀಡುತ್ತಿದ್ದ ಉದಾಹರಣೆಗಳಿವೆ. ಇಂತಹ ಹತ್ತಿಯ ಬಟ್ಟೆಯ ಮೇಲಿನ ಕಡತಗಳನ್ನು ಕಾರ್ಪಾಸಿಕಾ ಪಟಗಳು ಎಂದು ಕರೆಯಲಾಗಿದೆ. ಬಟ್ಟೆಗಳ ಮೇಲೆ ಬರೆದ ಕ್ರಯ ಪತ್ರಗಳು ಕ್ರಯ ಚೀರಿಕಾ ಎನಿಸಿಕೊಳ್ಳುತ್ತಿದ್ದವು. ಇಂತಹ ಕಡತಗಳನ್ನು 14ನೆಯ ಶತಮಾನದಿಂದ ಈಚೆಗೆ ಹೆಚ್ಚಾಗಿ ಕಾಣಬಹುದು. ಬೌದ್ಧ ಸಾಹಿತ್ಯ ಕೃತಿಗಳನ್ನು ಮೊದಲಿಗೆ ಚರ್ಮದ ಮೇಲೆ ಹೆಚ್ಚಿಗೆ ಬರೆಯಲಾಗುತ್ತಿತ್ತು ಎಂದು ತಿಳಿಯಲಾಗಿದೆ. ಕಾಲ ಮುಂದುವರಿದಂತೆ, ಶಾಸನವನ್ನು ತಾಮ್ರಪತ್ರಗಳಲ್ಲಿ ಕೊರೆಸಿ ರಾಜಾಸ್ಥಾನದ ಕಡತಗಳಿಗೆ ಸೇರಿಸಲಾಗುತ್ತಿತ್ತು; ದಾನ ಪಡೆದವನಿಗೆ ನೀಡಲಾಗುತ್ತಿತ್ತು ಮತ್ತು ವಿಷಯವು ಸಾರ್ವಜನಿಕರ ಅವಗಾಹನೆಗೂ ಬರಲಿ ಎಂಬ ಉದ್ದೇಶದಿಂದ ಕಲ್ಲಿನ ಮೇಲೆ ಕೊರೆಸಲಾಗುತ್ತಿತ್ತು. ವಿಷಯವನ್ನು ಹೀಗೆ, ಕಲ್ಲು ಅಥವಾ ಯವುದೇ ಘಟ್ಟಿ ವಸ್ತುವಿನ ಮೇಲೆ ಕೊರೆಸಿ ಕೊಡುತ್ತಿದ್ದುದರಿಂದ, ಈ ಕೊರೆಯುವ ಕ್ರಿಯೆಯ ಇಂಗ್ಲಿಷ್ ಶಬ್ದವನ್ನು ಗ್ರ್ರಹಿಸಿ, ಕ್ರಿಯಾರೂಪವಾದ iಟಿsಛಿಡಿibeನ ನಾಮರೂಪವಾದ iಟಿsಛಿಡಿiಠಿಣioಟಿಗೆ ಶಾಸನಗಳು ಎಂದು ಸಂಬೋಧಿಸಲಾಗಿದೆ. 

ಶಾಸನಗಳು ರಾಜನ ಆಜ್ಞೆಗಳಾದರಂತೂ ಅವುಗಳ ಮಹತ್ವ ಹೆಚ್ಚುತ್ತದೆ. ರಾಜನು ತನ್ನ ಆಜ್ಞೆಯನ್ನು ಬರಹದ ರೂಪದಲ್ಲೇ ಕಳುಹಿಸಬೇಕು ಎಂಬುದು ಕೌಟಿಲ್ಯನ ಸೂಚನೆ. ಬಾಯಿ ಮಾತಿನ ಮೂಲಕ ಹೇಳಿ ಕಳುಹಿಸಿದ ಯಾವುದೇ ಆಜ್ಞೆ ಅಥವಾ ವಿಚಾರವು ಬಾಯಿಂದ ಬಾಯಿಗೆ ವರ್ಗಾವಣೆ ಆಗುವಾಗ ಎಂತಹ ಬದಲಾವಣೆಗೂ ಗುರಿಯಾಗಬೇಕಾಗುತ್ತದೆ. ಲೇಖನವಿಲ್ಲದೆ ಆಜ್ಞೆ ಮಾಡುವ ರಾಜ, ಆಜ್ಞಾಪತ್ರಗಳಿಲ್ಲದೆ ಅಧಿಕಾರವನ್ನು ಪ್ರಯೋಗಿಸುವ ಅಧಿಕಾರಿಯನ್ನು ಶುಕ್ರನೀತಿ ಸಾರವು ಚೋರರು ಎಂದೇ ಗುರುತಿಸುತ್ತದೆ. ಅದೇ ಶುಕ್ರನೀತಿಸಾರವು ಶಾಸನದಲ್ಲಿ ರಾಜನ ಸಹಿ ಮತ್ತು ಆಜ್ಞೆಯ ಪ್ರಕಟಣೆಯ ದಿನಾಂಕ ಇರಲೇಬೇಕು ಮತ್ತು ರಾಜಾಜ್ಞೆಯನ್ನು ಡಂಗುರ ಹೊಡೆಯಿಸಿ ಜನರಿಗೆಲ್ಲಾ ತಿಳಿಸಬೇಕಲ್ಲದೆ, ನಾಲ್ಕು ದಾರಿಗಳು ಕೂಡುವೆಡೆ ಬರೆಯಿಸಿ ತಿಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಯಾವುದೇ ಆಜ್ಞೆ ಅಥವಾ ಶಾಶ್ವತ ಏರ್ಪಾಡು ನಿರಂತರವಾಗಿ ಮುಂದುವರಿಯಬೇಕಾದಲ್ಲಿ, ಅದು ಮುಂದಿನ ಜನತೆಗೆ ತಿಳಿಯಬೇಕು ಆ ಕಾರಣದಿಂದಲೂ ದಾಖಲೆಗಳು ಸುಲಭವಾಗಿ ನಾಶವಾಗದ, ಘಟ್ಟಿ ವಸ್ತುಗಳ ಮೇಲೆ ಕೊರೆಯಲ್ಪಟ್ಟಿರಬೇಕು ಎಂದು ಯಾಜ್ಞವಲ್ಕ್ಯ ಸ್ಮøತಿಯು ಸೂಚಿಸಿದೆ. 

ಯಾವುದೇ ಒಂದು ಘಟನೆ, ಒಂದು ದಾನ, ಒಂದು ಕೆಲಸ ಮುಂದಿನ ಜನಾಂಗಕ್ಕೆ ದಾಖಲೆಯಾಗಿ ಉಳಿಯಬೇಕು ಎಂಬ ಕಾರಣದಿಂದ ಘಟ್ಟಿಯಾದ ವಸ್ತುವಿನ ಮೇಲೆ ಕೊರೆಸಿ ಬರೆಸಲಾದ ಬರಹವನ್ನು ಶಾಸನ ಎಂದು ಪರಿಗಣಿಸಿರುವುದರಿಂದ, ಈಗ ನಮಗೆ ದೊರೆತಿರುವ ಅನೇಕ ಶಾಸನಗಳು ಆಯಾ ಕಾಲದ ದಾಖಲೆಗಳೇ ಆದ್ದರಿಂದ, ಅದರಲ್ಲೂ ಹಾಕಿಸಿದಂದಿನಿಂದ ಈವರೆಗೂ ಸಾರ್ವಜನಿಕರ ಗಮನಕ್ಕೆ ಬರುವಂತೆಯೇ ಉಳಿದಿರುವ ಶಿಲಾ ಶಾಸನಗಳು ಮತ್ತು ಖಾಸಗಿ ದಾಖಲೆಗಳಾಗಿ ಉಳಿದಿರುವ ತಾಮ್ರ ಶಾಸನಗಳು ಹಾಗೂ ಇತರ ಲೋಹಗಳ ಮೇಲಿನ ಯಾವುದೇ ಸ್ವರೂಪದ ದಾಖಲೆಗಳು ಆಯಾ ಕಾಲದ ಇತಿಹಾಸವನ್ನು ರಚಿಸಲು ಮತ್ತು ಪುನಾರಚಿಸಲು ಬಹು ಮುಖ್ಯ ಹಾಗೂ ಸಮರ್ಥ ದಾಖಲೆಗಳಾಗುತ್ತವೆ. ಈ ಹಿನ್ನೆಲೆಯಲ್ಲಿ, ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆ ಇರಲಿಲ್ಲ ಎಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಬಹುದು. ವೈಯುಕ್ತಿಕ ಪ್ರತಿಷ್ಠೆಯ ವಿಚಾರಗಳನ್ನು ದಾಖಲಿಸುವಲ್ಲಿ ಭಾರತದ ಹಿಂದಿನ ಜನ ಹಿಂದೆ ಬಿದ್ದಿರಬಹುದಾದರೂ, ಸಾಮಾಜಿಕ ಮತ್ತು ಸಾಂಸ್ಕøತಿಕ ವಿಚಾರಗಳನ್ನು ದಾಖಲಿಸುವಲ್ಲಿ ಸಂಕೋಚಿಸಿಲ್ಲ. 

ನಮ್ಮ ಪ್ರಾಚೀನ ಕವಿಗಳು ತಮ್ಮ ಸಾಹಿತ್ಯಿಕ ಕೃತಿಗಳಲ್ಲೂ ಸಮಕಾಲೀನ ವಿಚಾರಗಳನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಅದರಲ್ಲಿ ಶುದ್ಧ ಇತಿಹಾಸವನ್ನು ಹುಡುಕಲು ಸಾಧ್ಯವಿಲ್ಲವಾದರೂ, ಇತಿಹಾಸದ ಎಳೆಗಳನ್ನಂತೂ ಗುರುತಿಸಬಹುದು. ಕೆಲವು ರಾಜರುಗಳನ್ನು ಮತ್ತು ಕೆಲವು ವೀರರನ್ನು ಕುರಿತಂತೆ ಇರುವ ಕಾವ್ಯಗಳಲ್ಲಿ, ಸಾಹಿತ್ಯಾಂಶಗಳ ಜೊತೆಗೆ ಐತಿಹಾಸಿಕ ಮಾಹಿತಿಗಳನ್ನೂ ಹೆಕ್ಕಿ ತೆಗೆಯಬಹುದು. ಹಾಗೆ ಹೆಕ್ಕಿ ತೆಗೆಯುವ ಸಂದರ್ಭದಲ್ಲಿ ಪುರಾಣ, ದಂತಕಥೆಗಳನ್ನು ಜರಡಿಯಾಡಿ, ಶುದ್ಧ ಇತಿಹಾಸವನ್ನು ಆರಿಸುವ ಮತ್ತು ಜೋಪಾನವಾಗಿ ರಕ್ಷಿಸುವ ಕೆಲಸ ಆಗುತ್ತದೆ. ಹರ್ಷಚರಿತೆ, ವಿಕ್ರಮಾಂಕ ಚರಿತ್ರೆ, ಕುಮಾರ ರಾಮನ ಸಾಂಗತ್ಯ, ಚಿಕದೇವರಾಜ ಬಿನ್ನಪ, ಕೆಳದಿ ನೃಪ ವಿಜಯ ಇತ್ಯಾದಿ ಐತಿಹಾಸಿಕ ಕಾವ್ಯಗಳಲ್ಲಿನ ಐತಿಹಾಸಿಕ ವಿಚಾರಗಳನ್ನು ಇತರ ಸಮಕಾಲೀನ ದಾಖಲೆಗಳಿಂದ ಪರಿಶೀಲಿಸುವ ಕೆಲಸ ಸಾಧ್ಯವಾಗಿದೆ. ಇತಿಹಾಸ ನಿರೂಪಣೆಗೆಂದೇ ಪ್ರತ್ಯೇಕವಾದ ಕೃತಿಗಳು ಇಲ್ಲವೇ ಇಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕ್ರಿ.ಶ. 12ನೆಯ ಶತಮಾನದ ಕಲ್ಹಣನ ರಾಜತರಂಗಿಣಿಯನ್ನು ಐತಿಹಾಸಿಕ ಕೃತಿ ಎಂದೇ ಪರಿಗಣಿಸಲಾಗಿದೆ. ಕಾಶ್ಮೀರದ ಕಲ್ಹಣ ಕೆಲವು ಪೂರ್ವ ಕವಿಗಳನ್ನು ಹೆಸರಿಸಿ, ಅವರ ಕೃತಿಗಳನ್ನು ಆಧರಿಸಿ, ಹಿಂದಿನ ರಾಜರು ಹೊರಡಿಸಿದ ಪತ್ರಗಳು, ಪ್ರಶಸ್ತಿಗಳು, ಶಿಲಾಶಾಸನಗಳು, ಹಸ್ತಪ್ರತಿಗಳು ಇತ್ಯಾದಿಗಳನ್ನು ಪರಿಶೀಲಿಸಿ, ಹಿಂದಿನವರು ಮಾಡಿದ್ದ ತಪ್ಪುಗಳನ್ನು ತಿದ್ದಿ ತನ್ನ ಕೃತಿಯನ್ನು ಸಂಕಲಿಸಿರುವುದಾಗಿ ತಿಳಿಸಿದ್ದಾನೆ. ಆದರೆ, ಅವನ ಕೃತಿಯಲ್ಲೂ ಹಲವು ತಪ್ಪುಗಳು ಉಳಿದಿವೆ. ಕಲ್ಹಣನ ಪ್ರಕಾರ ಮೌರ್ಯ ವಂಶದ ಅಶೋಕ ಚಕ್ರವರ್ತಿಯ ಆಳ್ವಿಕೆಯ ಅವಧಿ ಕ್ರಿ.ಪೂ. 2448-1182. ಇದು ಈಗ ತಿಳಿದಿರುವ ವಿಚಾರಗಳ ಪ್ರಕಾರ ತಪ್ಪು. ಇಂತಹ ಹಲವು ತಪ್ಪುಗಳು ರಾಜತರಂಗಿಣಿಯಲ್ಲಿವೆ. ಇತಿಹಾಸಕಾರ ರಾಗ ದ್ವೇಷ ಮುಕ್ತನಾಗಿರಬೇಕು ಎಂದು ಆದರ್ಶ ಇತಿಹಾಸಕಾರನ ಲಕ್ಷಣವನ್ನು ಹೇಳುವ ಕಲ್ಹಣನ ರಾಜತರಂಗಿಣಿಯಲ್ಲೂ ಅನೇಕ ತಪ್ಪುಗಳು ಉಳಿದಿರುವುದರಿಂದ ಅಂತಹ ಕೃತಿಗಳಲ್ಲಿನ ಐತಿಹಾಸಿಕ ಅಂಶಗಳ ಬಗೆಗೂ ಅನುಮಾನಗಳು ಉಳಿಯುತ್ತವೆ. 

ಪುರಾಣಗಳು ಐತಿಹಾಸಿಕ ದಾಖಲೆಗಳಲ್ಲ. ಅವು ಒಂದು ಕಾಲಘಟ್ಟದಲ್ಲಿ ಇದ್ದ ಎಂದು ಜನ ನಂಬಿರುವ ಒಬ್ಬ ವ್ಯಕ್ತಿ ಅಥವಾ ಒಂದು ಕಾಲಘಟ್ಟದಲ್ಲಿ ಸಂಭವಿಸಿತು ಎನ್ನಲಾದ ಘಟನೆಯೊಂದರ ಬಗ್ಗೆ ವೈಭವೀಕರಿಸಿ, ಜನರಿಗೆ ಆ ವ್ಯಕ್ತಿ ಅಥವಾ ಆ ಘಟನೆಯ ಬಗ್ಗೆ ಭಕ್ತಿ ಹುಟ್ಟುವಂತೆ ರೂಪುಗೊಂಡ ಕಥೆಗಳೇ ಪುರಾಣಗಳು. ಇವುಗಳಲ್ಲಿ ಉತ್ಪ್ರೇಕ್ಷೆಗೆ ಮತ್ತು ಕಲ್ಪನೆಗೆ ಹೆಚ್ಚು ಅವಕಾಶಗಳಿರುವುದರಿಂದ ಸತ್ಯಕ್ಕೆ ದೂರವಾದ ವಿಚಾರಗಳಿರುವುದು ಸಹಜ. ಪುರಾಣದ ವಿಚಾರಗಳು ಇತಿಹಾಸದ ವ್ಯಾಖ್ಯೆಗೇ ಸರಿಹೊಂದುವುದಿಲ್ಲ. 

ಬಾಣನ ಹರ್ಷಚರಿತ, ಬಿಲ್ಹಣನ ವಿಕ್ರಮಾಂಕದೇವ ಚರಿತ, ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ ಇತ್ಯಾದಿ ಕೃತಿಗಳನ್ನು ಐತಿಹಾಸಿಕ ಕಾವ್ಯಗಳು ಎಂದೇ ಪರಿಗಣಿಸಲಾಗಿದೆ. ಹರ್ಷಚರಿತವು ಕನೂಜಿನಿಂದ ಆಳುತ್ತಿದ್ದ ಉತ್ತರಾಫಥೇಶ್ವರ ಎಂಬ ಬಿರುದು ಹೊಂದಿದ್ದ ಶ್ರೀಹರ್ಷನನ್ನು ಕುರಿತ ಕಾವ್ಯ. ಇವನ ಆಳ್ವಿಕೆಯ ಕಾಲ ಕ್ರಿ.ಶ. 605 ರಿಂದ 648 ಎಂದು ತಿಳಿಯಲಾಗಿದೆ. ಬಾಣನು ಶ್ರೀಹರ್ಷನ ಆಸ್ಥಾನದಲ್ಲೇ ಇದ್ದವನು; ಶ್ರೀಹರ್ಷನ ಸಮಕಾಲೀನ. ಬಾಣನು ಹರ್ಷಚರಿತದಲ್ಲಿ ಸಮಕಾಲೀನ ಸಮಾಜವನ್ನು ಅತ್ಯಂತ ಸಹಜವಾಗಿಯೇ ಚಿತ್ರಿಸಿದ್ದಾನೆ. ಹರ್ಷಚರಿತವನ್ನು ಮಹತ್ವದ ಐತಿಹಾಸಿಕ ಕಾವ್ಯ ಎಂದು ಪರಿಗಣಿಸಲಾಗಿದ್ದರೂ, ತನ್ನ ಸಮಕಾಲೀನನಾದ ಮತ್ತು ತನ್ನ ಆಶ್ರಯದಾತನಾದ ರಾಜನ ಬಗ್ಗೆ ಹೇಳುವಾಗ ಬಾಣಭಸಟ್ಟನು ಹರ್ಷನ ಗುಣಗಳನ್ನು ಉತ್ಪ್ರೇಕ್ಷೆ ಮಾಡಿರುವ ಸಾಧ್ಯತೆಗಳಿವೆ. ಆದ್ದರಿಂದ ಹರ್ಷಚರಿತೆಯ ಎಲ್ಲ ವಿಚಾರಗಳನ್ನೂ ಐತಿಹಾಸಿಕ ಸತ್ಯ ಎಂದು ಪರಿಗಣಿಸುವಂತಿಲ್ಲ. ಈ ಅಭಿಪ್ರಾಯವನ್ನು ಬಿಲ್ಹಣನ ವಿಕ್ರಮಾಂಕದೇವ ಚರಿತಕ್ಕೂ ಅನ್ವಯಿಸುವುದು ಅನಿವಾರ್ಯ. ಕ್ರಿ.ಶ. 11ನೆಯ ಶತಮಾನದವನೇ ಆದ ಬಿಲ್ಹಣನೂ ಕಾಶ್ಮೀರ ಮೂಲದವನು. ಕಲ್ಯಾಣ ಚಾಲುಕ್ಯ ವಂಶದ ಪ್ರಖ್ಯಾತ ದೊರೆ ತ್ರಿಭುವನಮಲ್ಲ ಆರನೆಯ ವಿಕ್ರಮಾದಿತ್ಯನ ಸಮಕಾಲೀನನಾದ ಬಿಲ್ಹಣನು, ತ್ರಿಭುವನಮಲ್ಲನ ಆಸ್ಥಾನದಲ್ಲೇ ಇದ್ದು, ಅವನ ಹೆಸರಿನಲ್ಲೇ ವಿಕ್ರಮಾಂಕದೇವ ಚರಿತ ಎಂಬ ಐತಿಹಾಸಿಕ ಕಾವ್ಯವನ್ನು ರಚಿಸಿದ್ದಾನೆ. ಆಹವಮಲ್ಲನ ಬದುಕಿನ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿ, ವಿಕ್ರಮಾದಿತ್ಯನ ಜೀವನ, ಸಾಧನೆಗಳನ್ನು ವಿವರವಾಗಿ ತಿಳಿಸುವ ಬಿಲ್ಹಣನು ವಿಕ್ರಮಾಂಕದೇವ ಚರಿತದಲ್ಲಿ ಕಾವ್ಯಾಂಶಗಳೆಲ್ಲವನ್ನೂ ಅಡಕಗೊಳಿಸಿದ್ದಾನೆ. ಇತಿಹಾಸದ ದೃಷ್ಟಿಯಿಂದ ಪರಿಶೀಲಿಸಿದಾಗ ಕಾವ್ಯದಲ್ಲಿ ಅನೇಕ ಲೋಪ-ದೋಷಗಳನ್ನು ಕಾಣಬಹುದು ಎಂಬುದು ವಿದ್ವಾಂಸರ ಅಭಿಮತ. ಹೀಗೆ, ಐತಿಹಾಸಿಕ ಎಂದು ಒಪ್ಪಿಕೊಂಡ ಕೃತಿಗಳಲ್ಲೂ ಇತಿಹಾಸಕ್ಕೆ ಅನ್ವಯಿಸದ ವಿಚಾರಗಳೂ ಇರುತ್ತವೆ ಎಂದು ಸ್ಪಷ್ಟವಾದ ಮೇಲೆ ಇತಿಹಾಸ ರಚನೆಗೆ ಪೂರ್ಣವಾಗಿ ಆ ಕೃತಿಗಳನ್ನು ವಿಶ್ವಾಸಾರ್ಹ ಆಕರಗಳೆಂದು ಒಪ್ಪಿಕೊಳ್ಳಲಾಗುವುದಿಲ್ಲ. ಹಾಗಾದರೆ, ಇತಿಹಾಸದ ರಚನೆಗೆ ಆಧರಿಸಬೇಕಾದ ಮುಖ್ಯ ಆಕರಗಳು ಯಾವುವು ಎಂಬ ಪ್ರಶ್ನೆ ಉಳಿಯುತ್ತದೆ. 

ಭೌತಿಕವಾದ ಎಲ್ಲ ವಸ್ತುಗಳಿಗೂ ಒಂದು ಇತಿಹಾಸ ಇದ್ದೇ ಇರುತ್ತದೆ. ಆ ಇತಿಹಾಸವನ್ನು ತಿಳಿಯುವುದು ಅವಶ್ಯಕ. ಭಾರತದ ಇತಿಹಾಸವನ್ನು ತಿಳಿಯಲು ಇರುವ ಅನೇಕ ಆಕರಗಳ ಪೈಕಿ, ಶಾಸನಗಳು ಪ್ರಮುಖವಾದುವು. ನಿವೇಶನಾನ್ವೇಷಣೆಯ ನಂತರ ಉತ್ಖನನದ ಮೂಲಕ ಭೂಶೋಧನೆ ಮಾಡಿ, ಶಾಸನಗಳ ಮೂಲಕ ಸಮಕಾಲೀನ ದಾಖಲೆಗಳನ್ನು ಪರಾಮರ್ಶಿಸಿ, ನಾಣ್ಯ ಶಾಸ್ತ್ರದ ನೆರವಿನಿಂದ, ಆಯಾ ಕಾಲದ ವಾಣಿಜ್ಯ ವ್ಯವಸ್ಥೆಯ ಪರಿಚಯ ಮಾಡಿಕೊಂಡು, ಸ್ಮಾರಕಗಳ ಮೂಲಕ ಆಯಾ ಕಾಲದ ವಾಸ್ತು ಮತ್ತು ಶಿಲ್ಪ ಹಾಗೂ ಇತರ ಕಲೆಗಳ ಬಗ್ಗೆ ತಿಳಿದು, ಇತಿಹಾಸದ ರಚನೆ ಅಥವಾ ಪುನಾರಚನೆ ಮಾಡಬೇಕಾಗುತ್ತದೆ. 
ಭಾರತೀಯ ಇತಿಹಾಸ ಮತ್ತು ಸಂಸ್ಕøತಿಯ ಅಧ್ಯಯನಕ್ಕೆ ಶಾಸನಗಳು ಪ್ರಮುಖ ಮೂಲ ಆಕರಗಳು. ಬಹು ಮುಖ್ಯವಾಗಿ ಇವು ಸಮಕಾಲೀನ ಬರಹದ ದಾಖಲೆಗಳು. ಆದ್ದರಿಂದ ಇವುಗಳನ್ನು ನಂಬಲರ್ಹ ಎಂದು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ಅಪರೂಪಕ್ಕೆ ಇವುಗಳಲ್ಲೂ ನಂಬಲು ಅನರ್ಹವಾದ ಶಾಸನಗಳು ಇದ್ದೇ ಇರುತ್ತವೆ. ಆದರೆ, ನಂಬಲು ಅನರ್ಹವಾದ ಶಾಸನಗಳನ್ನು ಕೂಟ ಶಾಸನಗಳು ಎಂದು ಗುರುತಿಸಿ, ಪ್ರತ್ಯೇಕಿಸಲು ಅವಕಾಶಗಳಿವೆ. ಕೆಲವು ಸಂದರ್ಭಗಳಲ್ಲಿ, ಶಾಸನಗಳಲ್ಲೂ ಜಯಿಸದ ರಾಜ್ಯಗಳನ್ನು ಜಯಿಸಿದಂತೆ, ಮಾಡದ ಒಳ್ಳೆಯ ಕೆಲಸಗಳನ್ನು ಮಾಡಿದಂತೆ ಉತ್ಪ್ರೇಕ್ಷೆಯ ವಿಚಾರಗಳು ಸೇರಿರುತ್ತವೆ. ಶಾಸನ ರಚನೆಯ ಕಾಲಕ್ಕೆ ಇದ್ದ ಸಾಂಪ್ರದಾಯಿಕ ಹೇಳಿಕೆಗಳು ಮತ್ತು ಐತಿಹ್ಯಗಳು ಶಾಸನ ಪಾಠದಲ್ಲಿ ಅವಕಾಶ ಪಡೆದಿರುತ್ತವೆ. ಅಂತಹ ಉತ್ಪ್ರೇಕ್ಷೆ ಮತ್ತು ಐತಿಹ್ಯಗಳನ್ನು ಹೊರತುಪಡಿಸಿ, ಶಾಸನ ಪಾಠವನ್ನು ಸಂಪಾದಿಸುವುದು ಶಾಸನ ತಜ್ಞನ ಕರ್ತವ್ಯವಾಗಿರುತ್ತದೆ. ಈಗಾಗಲೇ ಚರಿತ್ರೆಯ ಸ್ಥೂಲ ವಿಷಯಗಳು ಖಚಿತವಾಗಿ ತಿಳಿದಿರುವುದರಿಂದ, ಶಾಸನ ಪಾಠದ ಖಚಿತತೆಯನ್ನು ಪತ್ತೆ ಮಾಡುವುದು ಕಷ್ಟವಾಗುವುದಿಲ್ಲ. 

ಅಲೆಗ್ಸಾಂಡರ್‍ನ ದಾಳಿಯ ನಂತರ, ಭಾರತದ ಇತಿಹಾಸವು ಸ್ಪಷ್ಟವಾಗಿ ತಿಳಿಯುತ್ತದೆ ಎಂಬ ಸವಕಲು ಹೇಳಿಕೆಯೊಂದಿದೆ. ಆದರೆ, ಅದಕ್ಕೂ ಮೊದಲಿನ ಇತಿಹಾಸ ಈಗ ನಮಗೆ ತಿಳಿದಿದೆ ಮತ್ತು ತಿಳಿಯುತ್ತಿದೆ. ಬಾರತಕ್ಕೆ ಮುಸಲ್ಮಾನರ ಪ್ರವೇಶವಾದ ನಂತರ, ದಾಖಲೆಗಳನ್ನು ರಕ್ಷಿಸಿಡುವ ಕೆಲಸ ವ್ಯವಸ್ಥಿತವಾಗಿ ಆಗಿದೆ ಎಂದು ತಿಳಿಯಲಾಗಿದೆ. 
ಭಾರತದಲ್ಲಿ ಒಂದು ಹಂತದಲ್ಲಿ ಶಾಸನಗಳನ್ನು ಓದಬಲ್ಲ ಜನರೇ ಇರಲಿಲ್ಲ ಎಂದು ತಿಳಿಯಲಾಗಿದೆ. ಭಾರತದ ಪುರಾತತ್ವ ಶಾಸ್ತ್ರದ ಅಧ್ಯಯನ ವ್ಯವಸ್ಥಿತವಾಗಿ ನಡೆಯಲಾರಂಭಿಸಿದ ನಂತರ, ಪ್ರಾಚೀನ ಇತಿಹಾಸದ ಅಧ್ಯಯನಕ್ಕೆ ಬಹು ಮುಖ್ಯ ಪ್ರಾಥಮಿಕ ಆಕರಗಳಾದ ಶಾಸನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ಟಿದೆ. ಅದಕ್ಕೆ ಮೊದಲು ಶಾಸನಗಳ ಬಗ್ಗೆ ಕೆಲವರಲ್ಲಿ ಕುತೂಹಲ ಇದ್ದರೂ, ಓದಲಾಗದಿದ್ದುದರಿಂದ ಕೇವಲ ಕುತೂಹಲದ ಬರವಣಿಗೆಗಳಾಗಿಯೇ ಉಳಿದವು. ಕ್ರಿ.ಶ. 1356ರ ವೇಳೆಗೆ ಸುಲ್ತಾನ್ ಫಿರೋಜ್ ಷಾ ತೊಘಲಕನು ಹರಿಯಾಣಾದ ಅಂಬಾಲಾ ಜಿಲ್ಲೆಯ ಟೋಪ್ರಾದಿಂದ ಒಂದು ಮತ್ತು ಉತ್ತರ ಪ್ರದೇಶದ ಮೀರತ್‍ನಿಂದ ಒಂದು ಶಾಸನವನ್ನು ಓದಲೆಂದು ದೆಹಲಿಗೆ ತರಿಸಿಕೊಂಡಿದ್ದ. ಅವನ ಆಸ್ಥಾನದಲ್ಲಿದ್ದ ಯಾವ ವಿದ್ವಾಂಸನಿಗೂ ಆ ಶಾಸನಗಳನ್ನು ಓದಲು ಸಾಧ್ಯವಾಗಲಿಲ್ಲ. ಅಂದರೆ, ಕ್ರಿ.ಶ.14ನೆಯ ಶತಮಾನದ ವೇಳೆಗಾಗಲೇ ಬಾರತದಲ್ಲಿ ಪ್ರಾಚೀನ ಶಾಸನಗಳನ್ನು ಓದಬಲ್ಲ ಜನ ಇರಲಿಲ್ಲ. ವಿಲ್‍ಫೋರ್ಡ್ ಎಂಬ ವಿದ್ವಾಂಸನ ವರದಿಯ ಪ್ರಕಾರ ಎಲ್ಲೋರದಲ್ಲಿ ಪ್ರಾಚೀನ ಲಿಪಿಗಳನ್ನು ಓದಬಲ್ಲ ಒಬ್ಬ ಸನ್ಯಾಸಿಯನ್ನು ಅವನು ಕಂಡಿದ್ದ. ಆದರೆ, ಅದು ಎಷ್ಟರ ಮಟ್ಟಿಗೆ ಒಪ್ಪುವಂತಹ ಮಾತು ಎಂದು ತಿಳಿದಿಲ್ಲ. ಶಾಸನಗಳನ್ನು ಓದಲಾಗದಿದ್ದರೂ, ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಕೆಲಸ ಆಗುತ್ತಿತ್ತು ಎಂದು ತಿಳಿಯಲಾಗಿದೆ. ಕ್ರಿ.ಶ. 1672 ರಿಂದ 1704 ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ಚಿಕ್ಕದೇವರಾಜ ಒಡೆಯರು, ತಮ್ಮ ಆಳ್ವಿಕೆಗೆ ಸೇರಿದ್ದ ಪ್ರದೇಶದಲ್ಲಿನ ಎಲ್ಲಾ ಶಾಸನಗಳ ಪಟ್ಟಿ ಇದ್ದ ಒಂದು ಪುಸ್ತಕವನ್ನು ವ್ಯವಸ್ಥಿತವಾಗಿ ಇಡುವ ಕ್ರಮ ತೆಗೆದುಕೊಂಡಿದ್ದರಂತೆ. 
ಕ್ರಿ.ಶ. 1785ರಲ್ಲಿ ಪಂಡಿತ ರಾಧಾಕಾಂತ ಶರ್ಮರು ಚಾಹಮಾನ ವಂಶದ ದೊರೆ ವಿಗ್ರಹರಾಜನಿಗೆ ಸಂಬಂಧಿಸಿದ ಕ್ರಿ.ಶ. 1164ರ ಶಾಸನವನ್ನು ಓದಿದರೆಂದು ತಿಳಿದಿದೆ. 

ಭಾರತದ ಪುರಾತತ್ವ ಅಧ್ಯಯನವು ಕ್ರಿ.ಶ.18ನೆಯ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಮಹತ್ವ ಪಡೆಯಿತು. ಭಾರತಕ್ಕೆ ಕ್ರಿ.ಶ. 1783ರಲ್ಲಿ ಬಂದ ಸರ್ ವಿಲಿಯಂ ಜೋನ್ಸ್‍ಗೆ ಭಾರತದ ಪ್ರಾಚೀನ ಇತಿಹಾಸ ಮತ್ತು ಸಂಸ್ಕøತಿಗಳ ಅಧ್ಯಯನವು ಅತ್ಯಂತ ಆಸಕ್ತಿಯ ವಿಷಯವಾಗಿತ್ತು. ಅದಕ್ಕೆಂದೇ ಅವನು ಹುಟ್ಟು ಹಾಕಿದ ಸಂಸ್ಥೆ ಬಂಗಾಳದ ಏಷ್ಯಾಟಿಕ್ ಸೊಸೈಟಿ. ಈ ಸಂಸ್ಥೆಯು ಪ್ರಕಟಿಸುತ್ತಿದ್ದ ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಮತ್ತು ಏಷ್ಯಾಟಿಕ್ ರಿಸರ್ಚಸ್ ನಿಯತಕಾಲಿಕಗಳು ಭಾರತೀಯ ಇತಿಹಾಸ ಮತ್ತು ಸಂಸ್ಕøತಿಯ ಬಗ್ಗೆ ಆಸಕ್ತಿ ಇದ್ದ ಎಲ್ಲರಿಗೂ ಪ್ರಿಯವಾದವು. 
ಭಾರತದ ಶಾಸನ ಶಾಸ್ತ್ರದ ಅಧ್ಯಯನದ ಇತಿಹಾಸದಲ್ಲಿ ಕ್ರಿ.ಶ. 1837 ಬಹು ಮುಖ್ಯವಾದ ವರ್ಷ ಹಾಗೂ ಪ್ರಮುಖ ಘಟ್ಟ. ಆವರೆಗೆ ಯಾರಿಗೂ ಓದಲು ಸಾಧ್ಯವಿಲ್ಲ ಎಂದು ತಿಳಿದಿದ್ದ ಒಂದು ಶಾಸನವನ್ನು ಮೊಟ್ಟಮೊದಲ ಬಾರಿಗೆ ಓದಿದ ಜೇಮ್ಸ್ ಪ್ರಿನ್ಸೆಪ್ ಅದು ಅಶೋಕನ ಶಾಸನ ಎಂದು ಪ್ರಕಟಿಸಿದ. ಆವರೆಗೆ ಅಸಾಧ್ಯ ಎಂದು ತಿಳಿದಿದ್ದ ಶಾಸನಗಳ ಓದಿಗೆ ಇದು ನಾಂದಿ ಹಾಡಿತು. ಅಂದಿನಿಂದ ಈವರೆಗೆ ಭಾರತದಲ್ಲಿ ಶಾಸನಾಧ್ಯಯನ ನಿರಂತರವಾಗಿ ಮುಂದುವರಿದಿದೆ. 
ಭಾರತದಲ್ಲಿ ಕ್ರಿ.ಶ. 1862 ರಲ್ಲಿ ಭಾರತೀಯ ಪುರಾತತ್ವ ಶೋಧನಾ ಇಲಾಖೆ ಆರಂಭವಾಯಿತು. ಶಾಸನಾಧ್ಯಯನವೂ ಆ ಇಲಾಖೆಯ ಒಂದು ಭಾಗವಾಯಿತು. ಅದರ ಮೊದಲ ನಿರ್ದೇಶಕ ಅಲೆಗ್ಸಾಂಡರ್ ಕನಿಂಗ್‍ಹ್ಯಾಂ. ಉತ್ತರ ಬಾರತದಲ್ಲಿ ಇ.ಹುಲ್ಷ್, ಸರ್ ಜಾನ್ ಮಾರ್ಷಲ್, ಸರ್ ಮಾರ್ಟಿನ್ ವ್ಹೀಲರ್, ಬೂಹ್ಲರ್, ಬರ್ನೆಲ್, ಬರ್ಗೆಸ್ ಮುಂತಾದವರು, ದಕ್ಷಿಣ ಭಾರತದಲ್ಲಿ ಮೆಡೋಸ್ ಟೇಲರ್, ಕರ್ನಲ್ ಮೆಕೆಂಜಿ, ಬುಖನನ್, ಸರ್ ವಾಲ್ಟರ್ ಎಲಿಯಟ್, ಜೆ.ಎಫ್.ಫ್ಲೀಟ್, ಬಿ.ಎಲ್.ರೈಸ್, ಆರ್.ನರಸಿಂಹಾಚಾರ್, ಆರ್.ಶಾಮಾಶಾಸ್ತ್ರಿ, ಎಂ.ಎಚ್.ಕೃಷ್ಣ ಮುಂತಾದ ವಿದ್ವಾಂಸರು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಶಾಸನಾಧ್ಯಯನವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಈ ಎಲ್ಲ ವಿದ್ವಾಂಸರ ಅಧ್ಯಯನದ ಫಲವನ್ನು ಜರ್ನಲ್ ಆಫ್ ದಿ ರಾಯಲ್ ಏಷ್ಯಾಟಿಕ್ ಸೋಸೈಟಿ ಆಫ್ ಲಂಡನ್, ಜರ್ನಲ್ ಆಫ್ ದಿ ಬಾಂಬೆ ಬ್ರಾಂಚ್ ಆಫ್ ದಿ ರಾಯಲ್ ಏಷ್ಯಾಟಿಕ್ ಸೋಸೈಟಿ, ಜರ್ನಲ್ ಆಫ್ ದಿ ಏಷ್ಯಾಟಿಕ್ ಸೋಸೈಟಿ ಆಫ್ ಬೆಂಗಾಲ್, ಏಷ್ಯಾಟಿಕ್ ರಿಸರ್ಚಸ್, ಇಂಡಿಯನ್ ಆಂಟಿಕ್ವೆರಿ, ಎಪಿಗ್ರಾಫಿಯಾ ಇಂಡಿಕಾ, ಕಾರ್ಪಸ್ ಇನ್ಸ್‍ಕ್ರಿಪ್ಷನಮ್ ಇಂಡಿಕೇರಮ್, ಸೌತ್ ಇಂಡಿಯನ್ ಇನ್‍ಕ್ರಿಪ್ಷನ್, ಎಪಿಗ್ರಾಫಿಯಾ ಕರ್ನಾಟಿಕಾ ಇತ್ಯಾದಿ ಸಂಪುಟಗಳಲ್ಲಿ ಕಾಣಬಹುದು. 

ಉತ್ತರ ಭಾರತದಲ್ಲಿ ಹೆಚ್ಚಾಗಿ ತಾಮ್ರ ಅಥವಾ ಬೇರೆ ಯಾವುದೇ ಲೋಹದ ಶಾಸನಗಳು ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಶಿಲಾ ಶಾಸನಗಳೂ ದೊರೆತಿವೆ. ಸಂಖ್ಯೆಯ ದೃಷ್ಟಿಯಿಂದಲೂ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಶಾಸನಗಳಿವೆ. ಲೋಹ ಶಾಸನಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಸನಗಳು ಇರುವುದು ತಾಮ್ರದ ಫಲಕಗಳ ಮೇಲೆ. ತಾಳೆಯೋಲೆಗಳಂತೆ, ಇವುಗಳನ್ನೂ ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಿ, ಹದಗೊಳಿಸಿ, ಅದರ ಮೇಲ್ಮೈನಲ್ಲಿ ಶಾಸನವನ್ನು ಕೊರೆಸಲಾಗುತ್ತಿತ್ತು. ಕಾಲದಿಂದ ಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ತಾಮ್ರ ಶಾಸನಗಳ ಉದ್ದ, ಅಗಲ ಮತ್ತು ದಪ್ಪಗಳು ಬದಲಾಗಿವೆ. ಒಂದು ಶಾಸನಕ್ಕೆ ಒಂದಕ್ಕಿಂತ ಹೆಚ್ಚು ಫಲಕಗಳನ್ನು ಬಳಸಿರುವ ಸಂದರ್ಭಗಳೇ ಹೆಚ್ಚು. ಅಪರೂಪಕ್ಕೆ ಒಂದೇ ತಾಮ್ರ ಪಟ್ಟಿಕೆಯಲ್ಲಿ ಒಂದು ಶಾಸನವನ್ನು ದಾಖಲಿಸಿರುವ ಸಂದರ್ಭಗಳಿವೆ. ಶಾಸನಗಳೇ ಅಲ್ಲದೆ, ಕೆಲವು ಧಾರ್ಮಿಕ ಗ್ರಂಥಗಳನ್ನೂ ತಾಮ್ರ ಪಟ್ಟಿಕೆಗಳ ಮೇಲೆ ಕೊರೆದಿರುವ ಉದಾಹರಣೆಗಳಿವೆ. ಹ್ಯುಯನತ್ಸಾಂಗನ ಹೇಳಿಕೆಯ ಪ್ರಕಾರ ಕಾನಿಷ್ಕನು ಬೌದ್ಧ ಗ್ರಂಥಗಳನ್ನು ತಾಮ್ರ ಪಟ್ಟಿಕೆಗಳ ಮೇಲೆ ಕೊರೆಸಿದ್ದ. ಸಾಯಣರ ವೇದ ಭಾಷ್ಯಗಳು ತಾಮ್ರಪಟ್ಟಿಕೆಗಳ ಮೇಲೆ ನಕಲುಗೊಂಡಿವೆ. ಅನೇಕ ತೆಲುಗು ಕೃತಿಗಳು ತಿರುಪತಿಯಲ್ಲಿ ತಾಮ್ರ ಪಟ್ಟಿಕೆಗಳ ಮೇಲೇ ಇರುವುದನ್ನು ಕಾಣಬಹುದು. ತಾಮ್ರ ಶಾಸನಗಳನ್ನು ಕಲ್ಲಿನ ಪೆಟ್ಟಿಗೆಗಳಲ್ಲಿಟ್ಟು ರಕ್ಷಿಸಲಾಗುತ್ತಿತ್ತು. ಕೊಲ್ಹಾಪುರದಲ್ಲಿ ದೊರೆತ ಶಿಲಾಹಾರ ಗಂಡರಾದಿತ್ಯನ ತಾಮ್ರಪಟಗಳನ್ನು ಸರಿಯುವ ಮುಚ್ಚಳವಿದ್ದ ಕಲ್ಲಿನ ಪೆಟ್ಟಿಗೆಯಲ್ಲಿಡಲಾಗಿತ್ತು. ಪ್ಶೆಠಣದಲ್ಲಿ ದೊರೆತ ಯಾದವ ರಾಮಚಂದ್ರನ ಕ್ರಿ.ಶ. 1272ರ ಮೂರು ಫಲಕ (ತ್ರಿಫಳೀ)ದ ತಾಮ್ರ ಶಾಸನಗಳಲ್ಲಿ ಪ್ರತಿಯೊಂದು ಫಲಕವೂ 20.5 ಉದ್ದ, 15 ಅಗಲ ಇದ್ದು, ಇವುಗಳನ್ನು ಮೇಲೆ ಎರಡು ರಂಧ್ರಗಳನ್ನು ಕೊರೆಸಿ, ಅವುಗಳಿಗೆ ತಾಮ್ರದ ಬಳೆಗಳ ಮೂಲಕ ಎರಡು ಮುದ್ರೆಗಳನ್ನು ಹಾಕಿ ಭದ್ರಿಸಿಡಲಾಗಿತ್ತು. ಒಟ್ಟು 118 ಸಾಲುಗಳ ಈ ಶಾಸನದ ಒಟ್ಟು ತೂಕ ಸುಮಾರು 70 ಪೌಂಡುಗಳು. ತಾಮ್ರ ಶಾಸನಗಳ ಪೈಕಿ, ಅತಿ ವಿಸ್ತಾರವಾದ ಮತ್ತು ಹೆಚ್ಚಿನ ಸಂಖ್ಯೆಯ ಫಲಕಗಳಿರುವ ದೊಡ್ಡ ಶಾಸನವೆಂದರೆ, ಒಂದನೆಯ ರಾಜೇಂದ್ರ ಚೋಳನ ಕರಂದೈ ತಾಮ್ರಪಟಗಳು. ಒಟ್ಟು 55 ಫಲಕಗಳಿರುವ ಈ ಶಾಸನದಲ್ಲಿ ಪ್ರತಿ ಫಲಕದ ಅಳತೆಯು 16.5 ಉದ್ದ ಮತ್ತು 9.5 ಅಗಲ. 2500ಕ್ಕೂ ಹೆಚ್ಚು ಸಾಲುಗಳಿರುವ ಈ ಶಾಸನದ ಕಾಲ ಕ್ರಿ.ಶ. 1019ರಿಂದ 1021.(ಶಾಸನದ ಆರಂಭ 1019 ಮತ್ತು ಮುಕ್ತಾಯ 1021). 55 ಫಲಕಗಳನ್ನೂ ಸೇರಿಸಿ, ಮೇಲೆ ಎರಡು ರಂಧ್ರಗಳನ್ನು ಮಾಡಿ, ಎರಡು ರಂಧ್ರಗಳಿಗೂ ಮುದ್ರೆಗಳನ್ನು ಹಾಕಿಸಿ, ರಕ್ಷಿಸಿಡಲಾಗಿತ್ತು ಎಂದುತಿಳಿಯಲಾಗಿದೆ. ಈಗ ಶಾಸನದಲ್ಲಿ ಒಂದು ಮುದ್ರೆ ಮಾತ್ರ ಇದ್ದು, ಇನ್ನೊಂದು ಮುದ್ರೆಯು ಕಳೆದಿದೆ. ಶಾಸನದ ಒಟ್ಟು ತೂಕ 19 ಪೌಂಡು. ಮೇಲಿನ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಸಧ್ಯಕ್ಕೆ ಭಾರತದಲ್ಲಿ ದೊರೆತಿರುವ ಹೆಚ್ಚು ತೂಕದ ತಾಮ್ರ ಶಾಸನವು ಯಾದವ ರಾಮಚಂದ್ರನ ಪೈಠಣದ ತಾಮ್ರಪಟಗಳಾದರೆ, ಹೆಚ್ಚು ವಿಸ್ತಾರವಾದ ತಾಮ್ರಪಟಗಳ ಸ್ಥಾನವನ್ನು ಕರಂದೈ ತಾಮ್ರಪಟಗಳು ತುಂಬುತ್ತವೆ. ತಾಮ್ರಪತ್ರಗಳು ವೈಯುಕ್ತಿಕ ಹಕ್ಕಿನ ಪತ್ರಗಳಾದ್ದರಿಂದ, ಅದನ್ನು ಹೊಂದಿರುವವನ ವಾಸ ಸ್ಥಾನವು ಬದಲಾದಂತೆಲ್ಲಾ, ಅದರ ಸ್ಥಾನವೂ ಬದಲಗುತ್ತಿರುತ್ತದೆ. ಅಂತಹುದೇ ಕಾರಣಗಳಿಂದಾಗಿ ಚಲುಕ್ಯ ಇಮ್ಮಡಿ ಕೀರ್ತಿವರ್ಮನು ಧಾರವಾಡದ ಸುಳ್ಳಿಯೂರಿನಲ್ಲಿ ನೀಡಿದ ದಾನ ಶಾಸನವು ಕೋಲಾರ ಜಿಲ್ಲೆಯ ವಕ್ಕಲೇರಿಯಲ್ಲಿ ದೊರೆತಿದೆ. 

ತಾಮ್ರವನ್ನು ಹೊರತುಪಡಿಸದರೆ, ಶಾಸನಗಳಿಗೆ ಹೆಚ್ಚಾಗಿ ಬಳಸಿರುವ ಲೋಹವೆಂದರೆ, ಕಬ್ಬಿಣ. ಇಮ್ಮಡಿ ಚಂದ್ರಗುಪ್ತನ ಕ್ರಿ.ಶ. 415ರ ಮೆಹರೌಲಿಯ ತಾಮ್ರಪಟಗಳು ಈಗ ದೆಹಲಿಯ ಕುತುಬ್‍ಮಿನಾರ್‍ನ ಆವರಣದಲ್ಲಿದೆ. ಅಕ್ಬರನ ಒಂದು ಪರ್ಷಿಯನ್ ಶಾಸನವು ಕಬ್ಬಿಣದ ಕಂಬವೊಂದರ ಮೇಲೆ ಮಧ್ಯ ಪ್ರದೇಶದ ಧಾರ್‍ನಲ್ಲಿದೆ. ಅಬು ಪರ್ವತದ ಮೇಲಿರುವ ಕಬ್ಬಿಣದ ಬೃಹತ್ ತ್ರಿಶೂಲದ ಮೇಲಿರುವ ಶಾಸನದ ಕಾಲವು ಕ್ರಿ.ಶ. 1526. 

ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ತಕ್ಷಶಿಲೆಯಲ್ಲಿ ಚಿನ್ನದ ವಸ್ತುಗಳ ಮೇಲೆ ಕೊರೆಯಲ್ಪಟ್ಟಿವೆ. ಅಂತೆಯೇ ತಕ್ಷಶಿಲೆ ಮತ್ತು ಭಟ್ಟಿಪ್ರೋಲುಗಳಲ್ಲಿ ಬೆಳ್ಳಿಯ ವಸ್ತುಗಳ ಮೇಲೆ ಬರಹಗಳಿವೆ. ಜೈನ ಬಸದಿಗಳಲ್ಲಿನ ಯಂತ್ರಗಳೂ ಸಹ ಚಿನ್ನ ಅಥವಾ ಬೆಳ್ಳಿಯಲ್ಲಿರುತ್ತವೆ ಮತ್ತು ಅವುಗಳ ಮೇಲೂ ಬರಹ ಇರುತ್ತದೆ. ಆದ್ದರಿಂದ ಅವುಗಳನ್ನೂ ಶಾಸನಗಳೆಂದೇ ಪರಿಗಣಿಸಬೇಕಾಗುತ್ತದೆ. 

ಕಂಚಿನ ಮತ್ತು ಹಿತ್ತಾಳೆಯ ವಿಗ್ರಹಗಳು ಮತ್ತು ಪೂಜಾ ಸಾಮಗ್ರಿಗಳ ಮೇಲೂ ಬರವಣಿಗೆ ಇರುತ್ತದೆ. ಮಣ್ಣಿನ ಪಾತ್ರೆಗಳು, ಅವುಗಳ ಮೇಲಿನ ಮುಚ್ಚಳಗಳು, ಇಟ್ಟಿಗೆಗಳ ಮೇಲೂ ಬರವಣಿಗೆಯನ್ನು ಕಾಣಬಹುದು. ಜೇಡಿ ಮಣ್ಣಿನಿಂದ ಮಾಡಿದ ಹರಕೆಯ ಮುದ್ರೆ ಅಥವಾ ಪಟ್ಟಿಕೆಗಳ ಮೇಲೆ ಇರುವ ಬರಹವೂ ಸಹ ಸಾಂಸ್ಕøತಿಕ ಇತಿಹಾಸಕ್ಕೆ ಪ್ರಮುಖ ದಾಖಲೆಯಾಗುತ್ತದೆ. ವಿಶೇಷವಾಗಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಹರಕೆಯ ಮುದ್ರೆಗಳು ಮಣ್ಣಿನಿಂದ ತಯಾರಾಗಿರುತ್ತವೆ. ಇಂತಹ ಹಲವು ಮುದ್ರೆಗಳ ಭಂಡಾರವು ಭಾರತದ ಅನೇಕ ಭಾಗಗಳಲ್ಲಿ ದೊರೆತಿವೆ. ಬುದ್ಧನ ಐದನೆಯ ಶತಮಾನಕ್ಕೆ ಸೇರಬÀಹುದಾದ ಮಣ್ಣಿನ ಪ್ರತಿಮೆಯೊಂದು ಶಾಸನ ಸಹಿತ ಗೋರಕ್‍ಪುರ ಜಿಲ್ಲೆಯ ಕಾಸಿಯಾದಲ್ಲಿ ದೊರೆತಿದೆ. ಅಲ್ಲೇ ಬೌದ್ಧ ಸೂತ್ರಗಳನ್ನು ಬರೆಯಲಾಗಿರುವ ಇಟ್ಟಿಗೆಯ ಪಟ್ಟಿಕೆಯೂ ಸಿಕ್ಕಿದೆ. 

ಯಜ್ಞ ಯಾಗಗಳಲ್ಲಿನ ಯೂಪ ಸ್ಥಂಭಗಳ ಮೇಲಿನ ಶಾಸನಗಳು ದೊರೆತಿವೆ. ಅಂತಹ ಯೂಪ ಸ್ಥಂಭವೊಂದು ಬೆಳಗಾವಿಯ ವಡಗಾಂವ-ಮಾಧವಪುರದಲ್ಲಿ ದೊರೆತಿದೆ. ಆಂಧ್ರಪ್ರದೇಶದ ಸಾಲಿಗುಂಡಮ್‍ನಲ್ಲಿ ಶಂಖದ ಮೇಲೆ ಬರೆಯಲಾಗಿರುವ ಶಾಸನಗಳು ದೊರೆತಿವೆ. 

ಶಾಸನಗಳ ದಾಖಲೆಗೆ ಕಲ್ಲನ್ನು ಹೆಚ್ಚಾಗಿ ಆಧರಿಸಲಾಗಿದೆ. ಮೊದಲಿಗೆ ಒರಟು ಬಂಡೆಯ ಮೇಲೆ ಶಾಸನಗಳನ್ನು ಬರೆಸಲಾಗುತ್ತಿತ್ತು. ನಂತರ ಕಲ್ಲನ್ನು ಸ್ಥಂಭಾಕೃತಿಯಲ್ಲಿ ಸಿದ್ಧಪಡಿಸಿ, ಅದರ ಎಲ್ಲ ಮುಖಗಳಲ್ಲೂ ಶಾಸನವನ್ನು ಕೊರೆಸಲಾಗುತ್ತಿತ್ತು. ಮುಂದುವರಿದ ಕಾಲದಲ್ಲಿ, ಕಲ್ಲನ್ನು ಬೇಕಾದ ಆಕಾರಕ್ಕೆ ಸಿದ್ಧಪಡಿಸಿಕೊಂಡು, ಮೇಲ್ಮೈಯನ್ನು ಹದಗೊಳಿಸಿ ಶಾಸನವನ್ನು ಕೊರೆಸುವ ಕೆಲಸ ನಡೆದಿದೆ. ದೇವಾಲಯದ, ಚೈತ್ಯದ, ಬಸದಿಗಳ ಗೋಡೆಗಳ ಮೇಲೆ ಮತ್ತು ಅಧಿಷ್ಠಾನದಲ್ಲಿ ಶಾಸನಗಳನ್ನು ಬರೆಸಲಾಗಿದೆ. ಭಾರತದಲ್ಲಿ ಪ್ರಾಚೀನ ಶಾಸನಸ್ಥ ದಾಖಲೆ ಎಂದರೆ ಅಶೋಕನ ಶಾಸನಗಳು. ಭಾರತದ ವಾಯುವ್ಯದ ಅಂಚಿನಿಂದ ಆರಂಭಿಸಿ, ದಕ್ಷಿಣದಲ್ಲಿ ಕರ್ನಾಟಕದ ಅಂಚಿನವರೆಗೆ ಅಶೋಕನ ಶಾಸನಗಳು ಈವರೆಗೂ ಲಭಿಸಿವೆ. ಕಳೆದ ಕೆಲವು ವರ್ಷದ ಹಿಂದೆ, ಕರ್ನಾಟಕದ ಸನ್ನತಿಯಲ್ಲಿ ಅಶೋಕನ ಶಾಸನಗಳು ದೊರೆತಿವೆ. ಅಶೋಕನ ಶಾಸನಗಳು ಇನ್ನೂ ದೊರಕುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಬಂಡೆಗಳ ಮೇಲೆ, ನಯಗೊಳಿಸಿದ ಕಲ್ಲು ಕಂಬಗಳ ಮೇಲೆ, ಅಣಿಗೊಳಿಸಿದ ಚಪ್ಪಡಿಗಳ ಮೇಲೆ, ಗುಹೆಗಳ ಒಳಗೆ ಅಶೋಕನ ಶಾಸನಗಳಿವೆ. ಈವರೆಗೆ ಸುಮಾರು 45ಕ್ಕೂ ಹೆಚ್ಚು ಜಾಗಗಳಲ್ಲಿ ಅಶೋಕನ ಶಾಸನಗಳು ದೊರೆತಿವೆ. ಬ್ರಾಹ್ಮಿ, ಅರಮೈಕ್ ಅಥವಾ ಖರೋಷ್ಠಿ ಲಿಪಿಯಲ್ಲಿ ಪ್ರಾಕೃತ ಅಥವಾ ಗ್ರೀಕ್ ಭಾಷೆಯಲ್ಲಿರುವ ಅಶೋಕನ ಶಾಸನಗಳು ಆ ಕಾಲದ ಇತಿಹಾಸವನ್ನು ತಿಳಿಯಲು ಹೆಚ್ಚು ಸಹಕಾರಿಯಾಗಿವೆ. ಗಿರ್ನಾರ್‍ನಲ್ಲಿ ಅಶೋಕನ ಶಾಸನದ ಜೊತೆಗೆ ಕ್ರಿ.ಶ.150ರ ಮಹಾಕ್ಷತ್ರಪ ರುದ್ರದಾಮನ ಮತ್ತು ಕ್ರಿ.ಶ.ಸು.456ರ ಗುಪ್ತ ರಾಜ ಸ್ಕಂದಗುಪ್ತನ ಶಾಸನಗಳೂ ಇವೆ. ಅಂತೆಯೇ ಅಲಹಾಬಾದಿನ ಅಶೋಕ ಸ್ತಂಭದಲ್ಲಿ ಸಮುದ್ರಗುಪ್ತನ ಪ್ರಶಸ್ತಿ ಶಾಸನವೂ ಸೇರ್ಪಡೆ ಆಗಿದೆ. ಅಶೋಕನ ರುಮ್ಮಿಂದೈ ಶಾಸನವು ಬುದ್ಧನ ಜನ್ಮ ಸ್ಥಳವಾದ ಲುಂಬಿಣೀ ವನವನ್ನು ಗುರುತಿಸಲು ದಾರಿಮಾಡಿತು. 

ಬೌದ್ಧ ಸ್ತೂಪಗಳೊಳಗಿನ ಅವಶೇಷಗಳಲ್ಲೂ ಶಾಸನಗಳು ಇರುವ ಸಂಭವವನ್ನು ಅಲ್ಲಗಳೆಯುವಂತಿಲ್ಲ. ಸಾಂಚಿಯಲ್ಲಿನ ಒಂದು ಸ್ಥೂಪದಲ್ಲಿ ದೊರೆತಿರುವ ಎರಡು ಕರಂಡಕಗಳ ಮುಚ್ಚಳಗಳ ಮೇಲೆ ಮಸಿಯಲ್ಲಿ ಬರೆದ ಮ ಮತ್ತ ಸ ಎಂಬ ಅಕ್ಷರಗಳಿವೆ. ಈ ಅಕ್ಷರಗಳು ಕ್ರಮವಾಗಿ ಬುದ್ಧನ ಇಬ್ಬರು ಶಿಷ್ಯರಾದ ಸಾರಿಪುತ ಮತ್ತು ಮೊಗಲಾನರನ್ನು ಸ್ರಚಿಸುತ್ತವೆ. ಗುಹೆಗಳೂ ಸಹ ಬಹು ಮುಖ್ಯ ಶಾಸನಸ್ಥ ದಾಖಲೆಗಳಿಗೆ ಅವಕಾಶ ಕಲ್ಪಿಸಿವೆ. ಒರಿಸ್ಸಾದ ಹಾಥಿಗುಂಫಾ ಗುಹೆಯಲ್ಲಿರುವ ಕಳಿಂಗದ ದೊರೆ ಖಾರವೇಲನ ಶಾಸನದ ಕಾಳವು ಕ್ರಿ.ಪೂ. 156-55 ಎಂದು ತಿಳಿಯಲಾಗಿದೆ. ಮಹಾರಾಷ್ಟ್ರದ ನಾನಾಘಾಟ್ ಕಣಿವೆಯಲ್ಲಿ ಸಾತವಾಹನ-ಸಾತಕರ್ಣಿ ದೊರೆಗಳಲ್ಲೊಬ್ಬನ ಪತ್ನಿಯ ಶಾಸನ ದೊರೆತಿದೆ. ನಾಸಿಕ್, ಜುನ್ನರ್ ಮತ್ತು ಕಾರ್ಲೆಯ ಗುಹೆಗಳಲ್ಲಿ ಕ್ಷಹರಾತ ದೊರೆ ನಹಪಾನ, ಗೌತಮೀಪುತ್ರ ಶಾತಕರ್ಣಿ, ವಾಸಿಷ್ಠೀ ಪುತ್ರ ಪುಳುಮಾವಿಯ ಶಾಸನಗಳು ದೊರೆತಿವೆ. 
ಹಿಂದಿನ ರಾಜರು ತಾವು ಕೈಗೊಂಡ ವಿಜಯಯಾತ್ರೆಯಲ್ಲಿ ಸಫಲರಾಗಿ ಹಿಂದಿರುಗಿದ ಸಂದರ್ಬದಲ್ಲಿ ನೆನಪಿಗೆಂದು ವಿಜಯ ಸ್ತಂಭ ಅಥವಾ ಕೀರ್ತಿಸ್ತಂಭಗಳನ್ನು ನೆಡಿಸುತ್ತಿದ್ದರು. ಹಾಗೆ ನೆಡಿಸಿದ ಸ್ಥಂಭಗಳಲ್ಲಿ, ತಮ್ಮ ಗೆಲುವನ್ನು ದಾಖಲಿಸುತ್ತಿದ್ದರು. ಚಲುಕ್ಯ ಮಂಗಲೇಶನ ಅಂತಹ ಸ್ಥಂಭ ಶಾಸನವೊಂದು ಕರ್ನಾಟಕದ ಮಹಾಕೂಟದಲ್ಲಿ ದೊರೆತಿದ್ದು, ಈಗ ಅದು ಬಿಜಾಪುರದ ವಸ್ತು ಸಂಗ್ರಹಾಲಯದಲ್ಲಿದೆ. ಕದಂಬರ ಕಾಲದ ತಾಳಗುಂದ ಮತ್ತು ಗುಡ್ನಾಪುರಗಳ ಸ್ಥಂಭ ಶಾಸನಗಳು ಕೀರ್ತಿಸ್ಥಂಭಗಳಲ್ಲವಾದರೂ, ಆ ವಂಶಕ್ಕೆ ಸಂಬಂಧಿಸಿದ ಬಹು ಮುಖ್ಯ ಐತಿಹಾಸಿಕ ವಿಚಾರಗಳನ್ನು ಪ್ರಸ್ತಾಪಿಸಿವೆ. ರವಿಕೀರ್ತಿಯು ರಚಿಸಿರುವ ಐಹೊಳೆಯ ಮೇಗುತಿ ಗುಡಿಯ ಭಿತ್ತಿಯ ಮೇಲಿನ ಶಾಸನವು ಇಮ್ಮಡಿ ಪೊಲೆಕೇಶಿಯ ವಿಜಯಯಾತ್ರೆಯ ವಿವರಗಳಿರುವ ಶಾಸನ. ಅದರ ಕಾಲ ಕ್ರಿ.ಶ.  ಕಾರಣನಾದ ವ್ಯಕ್ತಿ ಮತ್ತು ಕಾರಣವಾದ ಸಂದರ್ಭಗಳ ವಿವರಗಳನ್ನು ನೀಡುವ ಶಾಸನಗಳಿವೆ. ದಕ್ಷಿಣ ಭಾರತದ ಶ್ರವಣಬೆಳಗೊಳದಲ್ಲಿ ಪ್ರಸಿದ್ಧ ಗೊಮ್ಮಟೇಶ್ವರ ಮೂರ್ತಿಯ ಕೆಳಭಾಗದಲ್ಲಿರುವ ಶಾಸನವು ಪ್ರತಿಮೆಯ ನಿರ್ಮಾಣ ಆದದ್ದನ್ನು ದಾಖಲಿಸಿದೆ. ಭಾಜಾದ ಗುಹೆಗಳಲ್ಲಿ ಅಡ್ಡಪಟ್ಟಿಗಳು ಮತ್ತು ಮರದ ಕಂಬಗಳ ಮೇಲೆ ಶಾಸನಗಳು ಕೆತ್ತಲ್ಪಟ್ಟಿವೆ. 
ಶಾಸನಗಳು ಕೇವಲ ರಾಜ, ಮಹಾರಾಜರ ಮತ್ತು ಅವರ ಅಧಿಕಾರಿ ವರ್ಗದವರ ಹೊಗಳಿಕೆ ಅಥವಾ ಹೆಗ್ಗಳಿಕೆಯ ದಾಖಲೆಗೆ ಮಾತ್ರ ಇಲ್ಲ. ಅದೆಷ್ಟೋ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು ಸಾಮಾನ್ಯ ಜನತೆಯು ಸಾಮಾಜಿಕವಾಗಿ ಹೊಂದಿದ್ದ ಸಂಬಂಧ ಮತ್ತು ಸಾಧಿಸಿದ ಮಹತ್ವದ ವಿಚಾರಗಳನ್ನು ಪ್ರಕಟಪಡಿಸುತ್ತವೆ. ಅತಕೂರಿನ ವೀರಗಲ್ಲು ಶಾಸನವು ರಾಷ್ಟ್ರಕೂಟ ಮತ್ತು ಚೋಳರ ನಡುವೆ ನಡೆದ ಯುದ್ಧಗಳು, ಅದರಲ್ಲಿ ಗಂಗ ದೊರೆಗಳ ಪಾತ್ರ ಮತ್ತು ಚೋಳರ ಸೋಲು ಮಾತ್ರವಲ್ಲದೆ, ರಾಜಾದಿತ್ಯನ ಸಾವಿನ ವಿಷಯವನ್ನು ದಾಖಲಿಸಿದೆ. ದೇಕಬ್ಬೆಯ ಶಾಸನವು ಗಂಗ-ಚೋಳ ಸಂಘರ್ಷದ ಕಾಲದಲ್ಲಿ ಸತಿ ಪದ್ಧತಿಗೆ ಇದ್ದ ಮಹತ್ವ ಮತ್ತು ಸಂಬಂಧಿಸಿದ ಆಚಾರ ವಿಚಾರಗಳ ವಿವರಣೆ ನೀಡಿದೆ. ಒಟ್ಟಾರೆ, ಯಾವುದೇ ಪ್ರಾಚೀನ ಸ್ಮಾರಕ ಅಥವಾ ನಿರ್ದಿಷ್ಟವಾದ ವಸ್ತುವಿನ ಮೇಲೆ ಶಾಸನಗಳನ್ನು ಕೆತ್ತುವ ಕೆಲಸ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ನಮ್ಮ ಪ್ರಾಚೀನರ ಬದುಕನ್ನು, ನಂಬಿಕೆಗಳನ್ನು ಖಚಿತವಾಗಿ ದಾಖಲಿಸಲು ಶಾಸನಗಳು ಸಹಾಯ ಮಾಡಿವೆ. ಶಾಸನಗಳು ರಾಜಾಜ್ಞೆಗಳು, ದಾನ-ದತ್ತಿಗಳು, ಆಳುವವರ ಸೋಲು-ಗೆಲುವು, ವೀರರ ಹೋರಾಟ, ವೀರ ಮರಣ, ಮಹಾಸತಿಯರ ಆತ್ಮಬಲಿ, ದೇವಾಲಯ, ಚೈತ್ಯ, ಬಸದಿಗಳ ನಿರ್ಮಾಣ, ಅವುಗಳಿಗೆ ದಾನ ಇತ್ಯಾದಿಗಳನ್ನು ಮಾತ್ರವಲ್ಲದೆ, ಬದುಕಿನ ನಶ್ವರತೆ, ಬದುಕಬೇಕಾದ ರೀತಿ ಇತ್ಯಾದಿಗಳ ಬಗೆಗೂ ತಿಳಿಸಿವೆ. ಆಶೋಕನ ಶಾಸನಗಳು ಮನುಷ್ಯ ಧರ್ಮದ ಬಗ್ಗೆ ತಿಳಿಸಿದರೆ, ಜೈನ ಧರ್ಮದ ಶಾಸನಗಳು ಬದುಕಿನ ನಶ್ವರತೆಯನ್ನು ದಾಖಲಿಸಿವೆ. ಆಲೇಖಗಳೆಂದು ಪರಿಗಣಿಸಲಾಗಿರುವ ಕೆಲವು ಹೆಸರುಗಳು ಶಿಲ್ಪವನ್ನು ಕೆತ್ತಿದ, ಮರಣವನ್ನು ಆಹ್ವಾನಿಸಿದ ಜೈನ ಮುನಿಗಳು ಮತ್ತು ಶ್ರಮಣರು, ಆಯಾ ತೀರ್ಥಕ್ಷೇತ್ರಗಳಿಗೆ ಬಂದಿದ್ದ ಪ್ರವಾಸಿಗಳ ಹೆಸರು ಇತ್ಯಾದಿ, ರಾಜಕೀಯ ಇತಿಹಾಸಕ್ಕೆ ಅಮುಖ್ಯವಾದ ಮತ್ತು ಸಾಂಸ್ಕøತಿಕ ಇತಿಹಾಸಕ್ಕೂ ಅಸ್ಪಷ್ಟ ದಾಖಲೆಗಳಾಗಿದ್ದರೂ ಸಹ, ಯಾವುದಾದರೂ ಸಂದರ್ಭದಲ್ಲಿ ಬಿಟ್ಟ ಜಾಗವನ್ನು ತುಂಬಿ, ಮಹತ್ವದ ವಿಷಯವೊಂದು ಬಹಿರಂಗಗೊಳ್ಳಲು ಕಾರಣವಾಗುತ್ತವೆ. ನಾಣ್ಯಗಳು ಮತ್ತು ಮುದ್ರೆಗಳ ಮೇಲಿನ ಆಲೇಖಗಳೂ ಇತಿಹಾಸ ರಚನೆಗೆ ನೆರವಾಗುತ್ತವೆ. 

 ಕೆಲವು ಶಾಸನಗಳಲ್ಲಿ ಕಾವ್ಯಗಳನ್ನೇ ಕೆತ್ತಲಾಗಿದೆ. ಆಂಧ್ರದ ಕವಿ ರಣಚೋಡನ 24 ಸರ್ಗಗಳ ರಾಜಪ್ರಶಸ್ತಿ ಕಾವ್ಯವನ್ನು 24 ಫಲಕಗಳ ಮೇಲೆ ಕೆತ್ತಲಾಗಿದೆ. ಪರಮಾರ ಭೋಜನ, ಪ್ರಾಕೃತ ಭಾಷೆಯ ಕೂರ್ಮಶತಕ ಮತ್ತು ಮದನನ ಪಾರಿಜಾತ ಮಂಜರಿ, ಚಾಹಮಾಣ ದೊರೆ 4ನೆಯ ವಿಗ್ರಹರಾಜನ ಹರಕೇಲಿ ನಾಟಕ, 4ನೆಯ ವಿಗ್ರಹರಾಜನ ಆಸ್ಥಾನ ಕವಿ ಸೋಮೇಶ್ವರನ ಲಲಿತ ವಿಗ್ರಹರಾಜ ನಾಟಕಗಳನ್ನು ಶಿಲಾಫಲಕಗಳೇ ಮೇಲೆ ಕಡೆಯಲಾಗಿರುವುದು ಒಂದು ವಿಶೇಷ. ಶ್ರವಣಬೆಳಗೊಳದ ಇಂದ್ರಗಿರಿಯ ಮೇಲಿನ ಶಿಲಾ ಶಾಸನವೊಂದು ಬೊಪ್ಪಣ ಪಂಡಿತನು ಬರೆದ ಗೊಮ್ಮಟ ಸ್ತುತಿ ಕಾವ್ಯವನ್ನು ಪ್ರಕಟಪಡಿಸಿದೆ. 
ಶಾಸನಗಳು ಇತಿಹಾಸ ರಚನೆ ಮತ್ತು ಪುನಾರಚನೆಗೆ ಮಹತ್ವದ ಮತ್ತು ಪ್ರಾಥಮಿಕ ಆಕರಗಳು. ಇವು ತಾಳಪತ್ರದಿಂದ ಕಾಗದದವರೆಗೆ ಯಾವುದೇ ವಸ್ತುವಿನ ಮೇಲೆ ಬರೆದ ವಿಷಯಗಳಿಗಿಂತಲೂ ಹೆಚ್ಚು ವಿಶ್ವಸನೀಯ ಎಂದು ತಿಳಿಯಲಾಗಿದೆ. ಸಾಹಿತ್ಯಿಕ ಮೂಲಗಳು ಅಥವಾ ಮತ್ತಾವುದೇ ಹೇಳಿಕೆಯ ಮೂಲಗಳಲ್ಲಿನ ದೋಷಗಳನ್ನು ಗುರುತಿಸಿ, ಸತ್ಯವನ್ನು ಪತ್ತೆ ಮಾಡುವಲ್ಲಿ ಶಾಸನಗಳು ನೆರವಾಗುತ್ತವೆ. ವಿಷಯಗಳನ್ನು ಖಚಿತಪಡಿಸಿಕೊಳ್ಳಲು ನೆರವಾಗುವ ಶಾಸನಗಳು ಸಮಕಾಲೀನ ದಾಖಲೆಗಳಾಗಿರುವುದರಿಂದ, ಮಹತ್ವ ಪಡೆಯುತ್ತವೆ. ಕ್ರಿ.ಶ 150ರ ಜುನಾಗಡ್ ಶಾಸನವು, ಚಂದ್ರಗುಪ್ತ ಮೌರ್ಯನ ಕಾಲದಲ್ಲಿ (ಕ್ರಿ.ಪೂ. 322-298) ನಿರ್ಮಿಸಿದ್ದ ಸುದರ್ಶನ ಸರೋವರವನ್ನು ಅಶೋಕನ ಕಾಲದಲ್ಲಿ(ಕ್ರಿ.ಪೂ. 322-298), ಅವನ ಅಧಿಕಾರಿ ಶುಷಸ್ಪನು ದುರಸ್ತಿಗೊಳಿಸಿ, ಕಾಲುವೆಗಳನ್ನು ತೋಡಿಸಿದ ವಿಷಯವನ್ನು ತಿಳಿಸುತ್ತದೆ. ಐಹೊಳೆಯ ಪೊಲೆಕೇಶಿಯ ಶಾಸನವು, ಅವನ ವಿಜಯಯಾತ್ರೆ, ಆಗಿನ ಆಂತರಿಕ ಆತಂಕಗಳ ಜೊತೆಗೆ, ಕಾಳಿದಾಸನ ಹೆಸರನ್ನು ಉಲ್ಲೇಖಿಸುವುದರಿಂದ, ಕಾಳಿದಾಸನ ಕಾಲವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು. ಕ್ರಿ.ಶ. 436ರ ವೇಳೆಗಾಗಲೇ ಸೂರ್ಯ ದೇವಾಲಯ ನಿರ್ಮಾಣವಾಗಿದ್ದ ವಿಷಯವನ್ನು ಮಂದಸೋರದ ಒಂದು ಶಾಸನವು ದಾಖಲಿಸಿದೆ. ಸಮುದ್ರಗುಪ್ತನ ಅಲಹಾಬಾದ್, ಯಶೋವರ್ಮನ ಮಂದಸೋರ್ ಮತ್ತು ಐಹೊಳೆಯ ಪೊಲೆಕೇಶಿಯ ಶಾಸನಗಳು ವಿಜಯಯಾತ್ರೆಗಳ ನಿರೂಪಣೆ ಮಾಡಿವೆ. ಖಾರವೇಲನ ಹಾಥಿಗುಂಫಾ ಶಾಸನವು ಅವನ ಜೀವನ ವೃತ್ತಾಂತವನ್ನು ದಾಖಲಿಸಿದೆ. ಇವು ಇತಿಹಾಸ ರಚನೆಗೆ ಉಪಯುಕ್ತವಾದರೂ, ಬರೆಯಲು ದೊರೆಯುವ ಸ್ಥಳಾವಕಾಶದ ಮಿತಿಯಿಂದ ವಿವರವಾದ ದಾಖಲೆಗಳಾಗಲು ಸಾಧ್ಯವಿಲ್ಲ. ಇದು ಶಾಸನಗಳ ಕೊರತೆ. ಶಾಸನಗಳಲ್ಲಿನ ಬಿರುದುಗಳು ಮತ್ತು ಪ್ರಶಸ್ತಿಗಳು ಶಾಸನದ ಸತ್ಯಾಸತ್ಯತೆಗಳನ್ನು ಪ್ರಶ್ನಿಸಲು ಕಾರಣವಾಗುತ್ತವೆ. ಎಷ್ಟೋ ಸಂದರ್ಭಗಳಲ್ಲಿ, ಅವು ಉತ್ಪ್ರೇಕ್ಷೆಗಳು ಎನಿಸುತ್ತದೆ. ಇಂತಹ ಸಮಸ್ಯೆಗಳು ಕಾಡುವುದು ಲೋಹ, ವಿಶೇಷವಾಗಿ ತಾಮ್ರಶಾಸನಗಳ ವಿಷಯದಲ್ಲಿ. ಸಾಮಾನ್ಯವಾಗಿ ತಾಮ್ರ ಶಾಸನಗಳು ಖಾಸಗಿ ದಾಖಲೆಗಳಾಗಿರುವುದರಿಂದ, ಯಾವುದೇ ಕಾರಣದಿಂದ ಅವುಗಳ ಪ್ರತಿಗಳಾಗುವ ಸಂದರ್ಭಗಳಿರುತ್ತವೆ. ಹಾಗೆ ಪ್ರತಿಯಾಗುವಾಗ ಅಥವಾ ದುರಾಸೆಯ ಕಾರಣದಿಂದ ಅವು ನಕಲುಗಳಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಲಿಪಿ ಸ್ವರೂಪ, ಭಾಷೆ, ಈಗಾಗಲೇ ತಿಳಿದಿರುವ ರಾಜಕೀಯ ವಿಚಾರಗಳು ಮತ್ತು ಕಾಲದ ಉಲ್ಲೇಖಗಳು ಕೂಟ ಶಾಸನಗಳ ಪತ್ತೆಗೆ ನೆರವಾಗುತ್ತವೆ. ಕ್ರಿ.ಶ. 1169ರ ಒಂದು ಬಂಡೆಗಲ್ಲು ಶಾಸನದ ಮೂಲಕ ಬ್ರಾಹ್ಮಣನೊಬ್ಬನು ಕನೋಜದ ಗಾಹಡವಾಲದ ರಾಜ ವಿಜಯಚಂದ್ರನ ಒಬ್ಬ ಅಧಿಕಾರಿಗೆ ಲಂಚ ಕೊಟ್ಟು ಕೃತಕ ಶಾಸನದ ಮೂಲಕ ಎರಡು ಹಳ್ಳಿಗಳ ದಾನ ಪಡೆದಿದ್ದುದು ತಿಳಿದಿದೆ. 

ಭಾರತದಲ್ಲಿ ಹಲವು ಸಾವಿರ ಶಾಸನಗಳಿವೆ. ಇವುಗಳಲ್ಲಿ ಎಲ್ಲವೂ ಪ್ರಕಟವಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಶಾಸನಗಳ ಸಂಖ್ಯೆ ಅಧಿಕವಾಗಿದೆ. ಭಾರತವನ್ನು ಅನೇಕ ರಾಜ ವಂಶಗಳು ಆಳಿವೆ. ಇಡಿಯಾಗಿ ಭಾರತವನ್ನು ಯಾವ ರಾಜ ವಂಶವೂ ಆಳಿಲ್ಲ. ಆದ್ದರಿಂದ ಯಾವುದೇ ಭಾಗದಲ್ಲಿ ಒಂದೇ ಭಾಷೆಯ ಮತ್ತು ಒಂದೇ ಲಿಪಿಯ ಶಾಸನಗಳನ್ನು ಕಾಣಲು ಸಾಧ್ಯವಿಲ್ಲ. ಭಾರತದ ಶಾಸನಗಳಲ್ಲಿ ಹಲವು ಭಾಷೆಯ ಮತ್ತು ಹಲವು ಲಿಪಿಯ ಶಾಸನಗಳಿವೆ. ಆತಿ ಹೆಚ್ಚಿನ ಪ್ರಾಚೀನ ಶಾಸನಗಳು ಬ್ರಾಹ್ಮೀ ಮತ್ತು ಖರೋಷ್ಠಿ ಲಿಪಿಗಳಲ್ಲಿವೆ. ನಂತರದ ಕಾಲದಲ್ಲಿ ದೇವನಾಗರೀ, ನಾಗರೀ, ಬಂಗಾಳೀ, ಅರೇಬಿಕ್, ಪರ್ಷಿಯನ್, ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಮ್ ಲಿಪಿಗಳನ್ನು ಬಳಸಲಾಗಿದೆ. ಸಿಂಧೂ ನದಿಯ ಬಯಲಿನ ಸಂಸ್ಕøತಿಗೆ ಸೇರಿದ ಮುದ್ರೆಗಳ ಮೇಲಿನ ಬರಹಗಳನ್ನು ಇನ್ನೂ ಸರ್ವಸಮ್ಮತವಾಗಿ ಓದಲಾಗಿಲ್ಲ. ಖರೋಷ್ಠಿ ಲಿಪಿಯ ಶಾಸನಗಳು ಭಾರತದ ವಾಯುವ್ಯ ಭಾಗದಲ್ಲಿ ಮಾತ್ರ ಹೆಚ್ಚಾಗಿ ದೊರೆತಿವೆ. ಖರೋಷ್ಠಿ ಲಿಪಿಯು ಅರಮೈಕ್ ಲಿಪಿಯಿಂದ ರೂಪುಗೊಂಡಿದೆ ಎಂದು ತಿಳಿಯಲಾಗಿದೆ. ಭಾರತದಲ್ಲಿ ಪ್ರಚಲಿತವಿದ್ದ ಮತ್ತು ಪ್ರಚಲಿತವಿರುವ ಅನೇಕ ಲಿಪಿಗಳಿಗೆ ಬಾಹ್ಮೀ ಲಿಪಿಯೇ ಮೂಲ ಎಂದು ತಿಳಿದಿದೆ. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಮತ್ತು ಇತರ ಪ್ರದೇಶಗಳಲ್ಲಿಯೂ ಹೆಚ್ಚಿನ ಶಾಸನಗಳು, ಅದರಲ್ಲೂ ವಿಶೇಷವಾಗಿ ತಾಮ್ರ ಶಾಸನಗಳು ಸಂಸ್ಕøತ ಭಾಷೆಯಲ್ಲಿವೆ. ಉಳಿದಂತೆ ಪ್ರಾಕೃತ, ಒರಿಯಾ, ಮರಾಠೀ, ಬಂಗಾಲೀ, ತಮಿಳು, ಕನ್ನಡ, ತೆಲುಗು, ಮಲಯಾಳಂ ಇತ್ಯಾದಿ ಆಯಾ ಪ್ರದೇಶದ ಪ್ರಧಾನ ಭಾಷೆಯಲ್ಲಿರುತ್ತವೆ. ಸಾಮಾನ್ಯವಾಗಿ, ಶಾಸನದ ಮಂಗಳ ಶ್ಲೋಕಗಳು ಮತ್ತು ಶಾಪಾಶಯದ ಭಾಗಗಳು ಮಾತ್ರ ಸಂಸ್ಕøತ ಭಾಷೆಯಲ್ಲೇ ಇರುತ್ತವೆ. ವಿಶೇಷವಾಗಿ, ದಾನದ ವಿವರಗಳು ಆಯಾ ಪ್ರಾದೇಶಿಕ ಭಾಷೆಯಲ್ಲೇ ಇರುತ್ತವೆ. ಅಪರೂಪಕ್ಕೆ ದ್ವಿಭಾಷಾ ಶಾಸನಗಳು ದೊರೆತಿವೆ. ಅವುಗಳಲ್ಲಿ ಒಂದನ್ನಾಗಿ ಜಿನವಲ್ಲಭನ ಕುರಿಕ್ಯಾಲಂ ಶಾಸನವನ್ನು ಉದಾಹರಿಸಬಹುದು. ಕನ್ನಡ ಲಿಪಿಯ ಈ ಶಾಸನದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳೆರಡೂ ಬಳಕೆಯಾಗಿವೆ. 

ಶಾಸನಗಳು ಅಧಿಕೃತ ದಾಖಲೆಗಳಾದ್ದರಿಂದ, ಅದರ ಪಾಠವನ್ನು ರಾಜನ ಅಥವಾ ಅಧಿಕಾರಿಯ ಆದೇಶದಂತೆ ಶಾಸನ ಕವಿ ಸಿದ್ಧಪಡಿಸುತ್ತಿದ್ದ. ಹಾಗೆ ಸಿದ್ಧಪಡಿಸಿದ ಶಾಸನ ಪಾಠವನ್ನು, ಶಾಸನವನ್ನು ಕೊರೆಯಲೆಂದೇ ಅಣಿಗೊಳಿಸಿದ ಶಿಲೆ, ಯಾವುದೇ ಲೋಹದ ಫಲಕ ಅಥವಾ ಮತ್ತಾವುದೇ ವಸ್ತುವಿನ ಮೇಲೆ ಶಾಸನ ಕವಿ ಅಥವಾ ಸುಂದರವಾಗಿ ಮತ್ತು ದೋಷಮುಕ್ತವಾಗಿ ಬರೆಯುವ ಅಕ್ಷರ ಬಲ್ಲ ಲಿಪಿಕಾರನು ಯಾವುದೇ ಬಣ್ಣ ಅಥವಾ ಮಸಿಯಂಥ ವಸ್ತುವಿನಿಂದ ಬರೆದು ಕೊಡುತ್ತಿದ್ದ. ಹಾಗೆ ಬರೆದುಕೊಟ್ಟ ಪಾಠವನ್ನು ಕಲ್ಲು ಕುಟಿಗ ಅಥವಾ ಓಜನು ಕಂಡರಿಸುತ್ತಿದ್ದ. ಅಶೋಕನ ಒಂದು ಶಾಸನವನ್ನು ಬರೆದ ಚಪಡನ ಹೆಸರು ನಮಗೆತಿಳಿದಿದೆ. ಅಂತಹುದೇ ಇನ್ನೂ ನೂರಾರು ಹೆಸರುಗಳು ದಾಖಲಾಗಿವೆ. 

ಶಾಸನ ಪಾಠಗಳನ್ನು ಗಮನಿಸಿದಾಗ, ಅಲ್ಲೂ ಸಹ ಒಂದು ನಿರ್ದಿಷ್ಟ ಕ್ರಮವನ್ನು ಅನುಸರಿಸಿರುವುದು ಕಂಡುಬರುತ್ತದೆ. ಶಾಸನದ ಮೊದಲ ಭಾಗವನ್ನು ಪೀಠಿಕಾ ಭಾಗ ಎಂದು ಒಪ್ಪಿಕೊಳ್ಳುವುದಾದರೆ, ಅದರಲ್ಲಿ ದಾನ ನೀಡುತ್ತಿರುವವನಿಗೆ ಸಂಬಂಧಿಸಿದ ಧರ್ಮದ ದೇವತೆಯ ಸ್ತುತಿ ಇರುತ್ತದೆ. ಶಾಸನದ ಆರಂಭದಲ್ಲಿ ಶುಭ ಸೂಚಕವಾಗಿ, ಸ್ವಸ್ತಿ, ಸಿದ್ಧಮ್, ಶುಭಮಸ್ತು ಇತ್ಯಾದಿ ಪದಗಳು ಇರುತ್ತಿದ್ದು, ಕ್ರಮೇಣ ಈ ಪದಗಳನ್ನು ಸಂಕೇತ/ಚಿಹ್ನೆಗಳ ಮೂಲಕ ಸೂಚಿಸುವ ಪರಿಪಾಠ ಮುಂದುವರಿದಿದೆ. ಈ ಮಂಗಳ ವಾಚನದ ನಂತರ ಪ್ರಾರ್ಥನೆ, ಶಾಸನವನ್ನು ಪ್ರಕಟಿಸಿದ ಸ್ಥಳ, ದಾನಿಯ ವಂಶಾವಳಿ ಮತ್ತು ದಾನಕ್ಕೆ ಸಂಬಂಧಿಸಿದ ಆದೇಶಗಳು ಇರುತ್ತವೆ.

ಶಾಸನದ ಎರಡನೆಯ ಭಾಗವೇ ಪ್ರಕಟಣೆ. ಈ ಭಾಗದಲ್ಲಿ ದಾನದ ಸ್ಪಷ್ಟೀಕರಣ, ದಾನ ಪಡೆದವನ ವಂಶಾವಳಿ, ದಾನ ಕೊಟ್ಟ ಸಂದರ್ಭ, ಅದಕ್ಕೆ ಪ್ರೇರಣೆಗಳು, ದಾನದ ಉದ್ದೇಶ ಮತ್ತು ದಾನದ ವಿವರಗಳು ಇರುತ್ತವೆ. ಶಾಸನದ ಕೊನೆಯ ಭಾಗವೇ ದಾನಚ್ಛೇದೋಪವರ್ಣನ. ಇದರಲ್ಲಿ ದಾನವನ್ನು ನೀಡಿದರೆ ಲಭಿಸುವ ಪುಣ್ಯ ಫಲಗಳು ಮತ್ತು ದಾನವನ್ನು ಕೆಡಿಸಿದರೆ ಅಥವಾ ಅಪಹರಿಸಿದರೆ ಲಭಿಸುವ ಪಾಪ ಫಲಗಳು ಉತ್ಪ್ರೇಕ್ಷೆ ಎನ್ನಿಸುವಷ್ಟರ ಮಟ್ಟಿಗೆ ವರ್ಣಿತವಾಗಿರುತ್ತವೆ. ಶಾಸನದ ಕೊನೆಗೆ ಶಾಸನದ ಕವಿ, ಲಿಪಿಕಾರ ಮತ್ತು ಓಜ(ಕಲ್ಲಿನ ಮೇಲೆ ಶಾಸನವನ್ನು ಕೊರೆದವನು) ಹೆಸರುಗಳನ್ನು ಕೆತ್ತಲಾಗಿರುತ್ತದೆ. ಎಲ್ಲ ಶಾಸನಗಳೂ ಹೀಗೆಯೇ ಇರುತ್ತವೆ ಅಥವಾ ಇರಬೇಕು ಎಂಬ ನಿಯಮವೇನೂ ಇಲ್ಲ. ಸಾಮಾನ್ಯವಾಗಿ ಶಾಸನಗಳು ಹೀಗಿರುತ್ತವೆ ಮತ್ತು ಇರಬೇಕು ಎಂದು ನಿರೀಕ್ಷಿಸಲಾಗುವುದು. ಕೆಲವು ಬಾರಿ ಈ ನಿಯಮಗಳನ್ನು ಎಲ್ಲಾ ಶಾಸನಗಳಲ್ಲೂ ಅನುಸರಿಸಿರುವುದಿಲ್ಲ. ಅದಕ್ಕೂ ವಿನಾಯಿತಿ ಇದ್ದೇ ಇರುತ್ತದೆ. ಶಾಸನದ ಕೊನೆಗೆ ದಾನ ನೀಡಿದವನ ಸಹಿ ಇರುವುದು ಅವಶ್ಯಕ. ಅದು ಅಧಿಕೃತತ್ವದ ಸಂಕೇತ. ಶ್ರೀಹರ್ಷನ, ವಿಜಯನಗರದ ಅರಸರ, ಮೈಸೂರು ಒಡೆಯರ ಸಹಿಗಳಿರುವ ಹಲವು ಶಾಸನಗಳು ಈಗಾಗಲೇ ದೊರೆತಿವೆ. 

ಮಂಗಳ ಶ್ಲೋಕ ಅಥವಾ ದೇವತಾ ಸ್ತುತಿಯು ಸಾಮಾನ್ಯವಾಗಿ ದಾನ ನೀಡಿದವನ ದರ್ಮವನ್ನು ಅವಲಂಬಿಸುತ್ತಿದ್ದವು. ಶೈವ ಶಾಸನಗಳಾದರೆ, ಹೆಚ್ಚಾಗಿ ನಮಸ್ತುಂಗಶಿರಶ್ಚುಂಬಿಚಂದ್ರಚಾಮರಚಾರವೇ ತ್ರೈಲೋಕನಗರಾರಂಭಮೂಲಸ್ಥಂಭಾಯ ಶಂಭವೇ ಎಂಬ ಶ್ಲೋಕ ಇರುತ್ತದೆ. ಇದು ಬಾಣ ಕವಿಯು ಹರ್ಷಚರಿತದಲ್ಲಿ ಶಿವನನ್ನು ಸ್ತುತಿಸಿರುವ ಶ್ಲೋಕ. ಬಹುತೇಕ ಶೈವ ಶಾಸನಗಳಲ್ಲಿ ಈ ಶ್ಲೋಕವೇ ಇರುತ್ತದೆ. ವಿಷ್ಣುಪರ ಸ್ತುತಿಯಾದರೆ ಜಯತ್ಯಾವಿಷ್ಕøತಂವಿಷ್ಣೋಃರ್ವಾರಾಹಂಕ್ಷೋಭಿತಾರ್ಣವಂ 

ದಕ್ಷಿಣೋನ್ನತದಂಷ್ಟ್ರಾಗ್ರವಿಶ್ವಾಂತಭುವನಂ ವಪುಃ ಎಂಬ ಶ್ಲೋಕ ಇರುತ್ತದೆ. ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘಲಾಂಛನಂ ಜೀಯಾತ್‍ತ್ರೈಲೋಕನಾಥಸ್ಯಶಾಸನಂ ಜಿನ ಶಾಸನಂಎಂಬ ಶ್ಲೋಕವು ಜೈನಪರ ಶಾಸನಗಳಲ್ಲಿರುತ್ತದೆ. ಇದು 10ನೆಯ ಶತಮಾನದ ನಂತರ ಕಾಣಿಸಿಕೊಳ್ಳುವ ಜಿನ ಸ್ತುತಿ. ಹೊಯ್ಸಳರ ಕೆಲವು ಶಾಸನಗಳಲ್ಲಿ ಶ್ರೀಮತ್ರೈಲೋಕ್ಯಪೂಜ್ಯಾಯ ಸರ್ವಕರ್ಮ ಸುಸಾಕ್ಷಿಣೇ ಫಲದಾಯ ನಮೋ ನಿತ್ಯಂ ಕೇಶವಾಯ ಶಿವಾಯಚ ಎಂಬ ಹರಿಹರ ಪರ ಶ್ಲೋಕಗಳೂ ಕಂಡುಬರುತ್ತವೆ. ಗಂಗರ ತಾಮ್ರ ಶಾಸನಗಳ ಆರಂಭದಲ್ಲಿ ಜಿತಂಭಗವತಾಗತ ಘನಗಗನಾಭೇನ ಪದ್ಮನಾಭೇನ ಶ್ರೀವ್ಮಜ್ಜಾಹ್ನವೇಯ ಕುಲಾಮಲ ವ್ಯೋಮಾವಭಾಸನ ಭಾಸ್ಕರಸ್ಯ ಎಂಬ ಜಿನಸ್ತುತಿ ಇರುತ್ತದೆ. 

ಭಾರತೀಯ ಶಾಸನಗಳು ಆಯಾ ಕಾಲದ ಸಾಹಿತ್ಯಿಕ ಪ್ರಭಾವಕ್ಕೂ ಒಳಗಾಗಿವೆ. ಆರಂಭ ಕಾಲದ ಸಂಸ್ಕøತ ಶಾಸನಗಳು ಸುಲಭ ಗ್ರಾಹ್ಯವೇನಲ್ಲ. ಅವುಗಳ ಅರ್ಥೈಕೆಗೆ ಸಂಸ್ಕøತ ವ್ಯಾಕರಣ ವಿಶೇಷಗಳು, ಕಾವ್ಯ ಪರಿಭಾಷೆ, ಛಂದಸ್ಸು ಇತ್ಯಾದಿಗಳ ಪರಿಚಯ ಅಗತ್ಯ. ಹಾಗೆಯೇ ಪ್ರಾದೇಶಿಕ ಭಾಷೆಯ ಶಾಸನಗಳಲ್ಲೂ ಭಾಷಾ ಪ್ರೌಢಿಮೆ ಇದ್ದೇ ಇರುತ್ತದೆ. ಆಯಾ ಕಾಲದ ಭಾಷೆಯ ಸ್ವರೂಪವು ಶಾಸನ ಪಾಠಗಳ ಮೇಲೂ ಪ್ರಭಾವ ಬೀರಿರುವುದು ಸಹಜ. ಶಾಸನ ಪಾಠವನ್ನು ಸಿದ್ಧಪಡಿಸುತ್ತಿದ್ದವರಲ್ಲಿ ಬಹುತೇಕ ವ್ಯಕ್ತಿಗಳು ವಿದ್ವಾಂಸರೇ ಆಗಿರುತ್ತಿದ್ದ ಕಾರಣದಿಂದ ಶಾಸನ ಪಾಠವು ಕಾವ್ಯಾತ್ಮಕವಾಗಿಯೇ ಇರುತ್ತಿದ್ದವು. ಸಾಮಾನ್ಯ ಜನತೆಗೆ ಸಂಬಂಧಿಸಿದ ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳ ಮೇಲಿನ ಶಾಸನಗಳು ಮಾತ್ರ ಗದ್ಯಾತ್ಮಕವಾಗಿರುವ ಸಂಭವಗಳುಂಟು. ಹಳೇಬೀಡಿನ ಕುವರಲಕ್ಷ್ಮನ ವೀರಗಲ್ಲು ಶಾಸನ, ಬೆಳತೂರಿನ ದೇಕಬ್ಬೆಯ ಮಾಸ್ತಿಗಲ್ಲು ಶಾಸನಗಳು ಗದ್ಯ ಪದ್ಯ ಮಿಶ್ರವಾಗಿಯೇ ಇವೆ. ರಾಜರ, ಅಧಿಕಾರಿಗಳ ಮತ್ತು ಶ್ರೀಮಂತರ ಶಾಸನಗಳು ಕಾವ್ಯಮಯವಾಗಿಯೇ ಇರುತ್ತವೆ. ಅರೇಬಿಕ್ ಭಾಷೆಯ ಶಾಸನಗಳು ಸಾಮಾನ್ಯವಾಗಿ ಗದ್ಯಾತ್ಮಕವಾಗಿಯೇ ಇರುತ್ತವೆ. ಕ್ರಿ.ಶ. 16ನೆಯ ಶತಮಾನದ ಎರಡನೆಯ ದಶಕ ಮತ್ತು ನಂತರದ ಕೆಲವು ಅರೇಬಿಕ್ ಶಾಸನಗಳು ಮಾತ್ರ ಪದ್ಯಾತ್ಮಕವಾಗಿವೆ. ಅರೇಬಿಕ್ ಶಾಸನಗಳ ಲಿಪಿಯು ಕಲಾತ್ಮಕವಾಗಿರುತ್ತವೆ. ಇವನ್ನು ಕೂಫಿಕ್, ನಸ್ತಲಿಕ್, ನಷ್ಕ್, ತುಲ್ತ್ ಇತ್ಯಾದಿಯಾಗಿ ವಿಂಗಡಿಸಲಾಗಿದೆ. ಈ ಲಿಪಿಗಳನ್ನು ಬಾಣ, ಪಕ್ಷಿ, ಪ್ರಾಣಿ, ಗಿಡ, ಬಳ್ಳಿ ಇತ್ಯಾದಿಗಳನ್ನು ಬಳಸಿ ಅಲಂಕಾರಯುತವಾಗಿ ಬರೆಯಲಾಗಿರುತ್ತದೆ. ಈ ಲಿಪಿಗಳಲ್ಲಿ ಕೆಲವು ನಿರ್ದಿಷ್ಟ ಸಂಕೇತಗಳು ಇರುತ್ತವೆ. 

ಆರಂಭದ ಶಾಸನಗಳಲ್ಲಿ ಶಾಸನವನ್ನು ದಾಖಲಿಸಿದ ಅಥವಾ ದಾನ ನೀಡಲಾದ ಕಾಲವನ್ನು ಉಲ್ಲೇಖಿಸುವ ಪದ್ಧತಿ ಇರಲಿಲ್ಲ. ದಾನ ನೀಡಿದವನು ರಾಜನಾಗಿದ್ದರೆ, ಅವನ ಆಳ್ವಿಕೆಯ ವರ್ಷವನ್ನು ಸೂಚಿಸಿ, ಕಾಲದ ಉಲ್ಲೇಖ ಮಾಡಲಾಗುತ್ತಿತ್ತು. ಕ್ರಮೇಣ ಸಂವತ್ಸರ, ಋತು, ಮಾಸ, ಪಕ್ಷ, ತಿಥಿ, ವಾರ ಇತ್ಯಾದಿ ಎಲ್ಲ ವಿವರಗಳನ್ನೂ ಶಾಸನಗಳು ಉಲ್ಲೇಖಿಸತೊಡಗಿದವು. ಕ್ರಿ.ಶ. 10ನೆಯ ಶತಮಾನದ ನಂತರದ ಶಾಸನಗಳಲ್ಲಿ ಕಾಲದ ವಿವರಗಳು ಸ್ಪಷ್ಟವಾಗಿವೆ. ತಮಿಳುನಾಡಿನ ಶಾಸನಗಳಲ್ಲಿ ಅರಸನ ಆಳ್ವಿಕೆಯ ವರ್ಷ/ದಿನವನ್ನೂ ತಿಳಿಸುವ ಪ್ರಯತ್ನ ನಡೆದಿದೆ. ಕಾಲದ ನಿರ್ದೇಶನದಲ್ಲಿ ಹಲವು ಶಕ ವರ್ಷಗಳನ್ನು ಬಳಸಲಾಗಿದೆ. ಬಳಕೆಯಲ್ಲಿರುವ ಅತ್ಯಂತ ಪ್ರಾಚೀನ ಶಕ ವರ್ಷ ಎಂದರೆ ವಿಕ್ರಮ ಶಕೆ. ಇದರ ಆರಂಭ ಕ್ರಿ.ಪೂ. 58. ಶಕ ವರ್ಷದ ಕಾಲಗಣನೆಯು ಕ್ರಿ.ಶ.78ರಿಂದ ಆರಂಭ ಆಗುತ್ತದೆ. 13ನೆಯ ಶತಮಾನದ ನಂತರ ಈ ಶಕ ವರ್ಷವೇ ಶಾಲೀವಾಹನ ಶಕೆ ಎನಿಸಿಕೊಂಡಿತು. ಇವುಗಳಲ್ಲದೆ, ಸೃಷ್ಟಿ ಆರಂಭಗೊಂಡಿತು ಎಂದು ತಿಳಿಯಲಾದ ಸೃಷ್ಟಿ ಗತಾಬ್ಧ ವರ್ಷ 19,55,58,83,101, ಕ್ರಿಪೂ. 3102 ರಿಂದ ಆರಂಭಗೊಂಡಿದೆ ಎಂದು ತಿಳಿಯಲಾದ ಮಹಾಭಾರತ ಯುದ್ಧ ವರ್ಷ/ಕಲಿಯುಗ ವರ್ಷ, ಕ್ರಿ.ಶ.248ರಿಂದ ಆರಂಭಗೊಂಡಿದೆ ಎಂದು ತಿಳಿಯಲಾದ ಕಲಚೂರಿ ಸಂವತ್ಸರ, ಕ್ರಿ.ಶ. 319 ರಿಂದ ಆರಂಭಗೊಂಡಿದೆ ಎಂದು ಭಾವಿಸಲಾದ ಗುಪ್ತ ಸಂವತ್ಸರ, ಕ್ರಿ.ಶ.1075ರಲ್ಲಿ ಕಲ್ಯಾಣ ಚಾಳುಕ್ಯ ವಂಶದ ತ್ರಿಭುವನಮಲ್ಲ ವಿಕ್ರಮಾದಿತ್ಯನ ಪಟ್ಟಾಭಿಷೇಕದ ಸಂದರ್ಭದಲ್ಲಿ ಆರಂಭಗೊಂಡ ಚಾಲುಕ್ಯ ವಿಕ್ರಮ ವರ್ಷ ಇತ್ಯಾದಿಗಳು ಕಾಲಗಣನೆಗೆ ಬಳಸುವ ಸಂವತ್ಸರಗಳು ಎಂದು ತಿಳಿಯಲಾಗಿದೆ. ಹೀಗೆ ಒಬ್ಬ ರಾಜನ ಹೆಸರಿನಲ್ಲಿ ಬಳಕೆಗೆ ಬಂದ ಕಾಲ ಗಣನೆಯು, ಅವರ ಆಳ್ವಿಕೆ ಮುಗಿದೊಡನೆಯೇ ಮರೆಯಾಗಿವೆ. ಆದರೆ, ಶಕ ವರ್ಷದ ಬಳಕೆ ಮಾತ್ರ ಬಹು ದೀರ್ಘ ಕಾಲದಿಂದ ಉಳಿದಿದೆ. ಬಾದಾಮಿಯ ಬಂಡೆಗಲ್ಲು ಶಾಸನದಲ್ಲೇ ಶಕ ವರ್ಷದ ಉಲ್ಲೇಖ ಇದೆ. ಕಲಿಯುಗ ವರ್ಷದ ಉಲ್ಲೇಖವು ಐಹೊಳೆಯ ಪೊಲೆಕೇಶಿಯ ಶಾಸನದಲ್ಲಿದೆ. ಈ ಕಲಿಯುಗ ವರ್ಷದ ಬಳಕೆಯನ್ನು ಅಪರೂಪವಾಗಿ ಬಳಸಲಾಗಿದೆ. ಮಹಮದೀಯ ಶಾಸನಗಳಲ್ಲಿ ಹಿಜರಿ ಶಕೆಯ ಗಣನೆ ಇದೆ. ಅಕ್ಬರ್ ತನ್ನ ಕಾಲದಲ್ಲಿ ಇಲಾಹಿ ಹಾಗೂ ಫಸ್ಲಿ ಶಕೆಯನ್ನು ಆರಂಭಿಸಿದ. ಬಿಜಾಪುರದ ಆದಿಲ್‍ಶಾಹಿಗಳು ಶುಹುಲ್ ಶಕೆಯನ್ನೂ, ಟಿಪ್ಪು ಸುಲ್ತಾನನು ಮೌಲೂದಿ ಶಕೆಯನ್ನೂ ಬಳಕೆಗೆ ತಂದಿದ್ದರು. ವರ್ಷಗಳ ಸೂಚನೆಗೆ ಸಂಖ್ಯೆಯ ಬದಲು ಸಂಕೇತಗಳನ್ನು ಬಳಸುತ್ತಿದ್ದ ಸಂದರ್ಭಗಳೂ ಇದ್ದವು. ಶೂನ್ಯ, ಗಗನ, ಅಂಬರ ಇತ್ಯಾದಿಗಳು ಶೂನ್ಯ, ಅಂದರೆ ಸೊನ್ನೆಯ ಸೂಚನೆ. ಆದಿ, ಇಂದು, ಶಶಿ, ಚಂದ್ರ, ಭೂಮಿ ಇತ್ಯಾದಿಗಳು ಒಂದರ ಸಂಕೇತ. ಹೀಗೆ ಸೊನ್ನೆಯಿಂದ ಒಂಭತ್ತರವರೆಗೆ ಸಂಖ್ಯೆಗಳ ಸೂಚನೆಗೆ ನಿರ್ದಿಷ್ಟ ಸಂಕೇತಗಳನ್ನು ಬಳಸಲಾಗಿದೆ. ಸಂಖ್ಯೆಗಳ ಸೂಚನೆಗೆ ಕಟಪಯಾದಿ ಸೂತ್ರವನ್ನೂ ಕೆಲವು ಸಂದರ್ಭಗಳಲ್ಲಿ ಬಳಸಲಾಗಿದೆ. ಕ, ಚ, ಟ ವರ್ಗಗಳಲ್ಲಿ ತಲಾ ಐದು ಅಕ್ಷರಗಳಿರುತ್ತವೆ. ಇವು ಕ್ರಮವಾಗಿ ಒಂದರಿಂದ ಐದರ ಬರೆಗಿನ ಸಂಖ್ಯೆಗಳನ್ನು ಸೂಚಿಸುತ್ತವೆ. ಯ ದಿಂದ ಆರಂಭವಾಗಿ ಳ ವರೆಗಿನ ಹತ್ತು ಅಕ್ಷರಗಳು ಒಂದರಿಂದ ಹತ್ತನ್ನು ಸೂಚಿಸುತ್ತವೆ, ಹೀಗೆ ಸೂಚಿತವಾದ ಸಂಖ್ಯೆಗಳನ್ನು ಅಂಕಾನಾಂ ವಾಮತೋ ಗತಿಃ ಎಂಬ ಸೂತದ್ರ ಪ್ರಕಾರ ಎಡದಿಂದ ಗಣನೆಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ ಕಾಲವನ್ನು ಕಟಪಯಾದಿ ಪದ್ಧತಿಯಲ್ಲಿ ಸೇತುವಂದ್ಯ ಎಂದು ಸೂಚಿಸಿದಾಗ ಅದು 7841 ಆಗುತ್ತದೆ. ಅದನ್ನು ಎಡದಿಂದ ಗಣನೆಗೆ ತೆಗೆದುಕೊಂಡು, ಅಂದರೆ 1487 ಎಂದು ಗಣನೆಗೆ ತೆಗೆದುಕೊಳ್ಳಬೇಕು. ಆಂತೆಯೇ ಶಕೇ ಚಂದ್ರರಸಾಮರೇಂದ್ರ ಗಣಿತೇ ಎಂದರೆ, 1641 (ಚಂದ್ರ=1, ರಸ=6, ಅಮರ=4, ಇಂದ್ರ =1). ಇದನ್ನು ಹಿಂದುಮುಂದಾಗಿ (ಅಂಕಾನಾಂ ವಾಮತೋಗತಿಃ) ಓದಿದಾಗ 1461. ಶಾಸನವು ಸೂಚಿಸುತ್ತಿರುವ ಶಕ ವರ್ಷವು 1461. ಅದು ಕ್ರಿ.ಶ. 1539ಕ್ಕೆ ಸರಿಹೊಂದುತ್ತದೆ.  

ಭಾರತದಲ್ಲಿ ದೊರೆತಿರುವ ಶಾಸನಗಳು ಇಲ್ಲಿಯ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸದ ರಚನೆಗೆ ಮತ್ತು ಪುನಾರಚನೆಗೆ ಮಹತ್ವದ ಆಕರಗಳಾಗಿವೆ. ಶಾಸನಗಳನ್ನು ಕುರಿತು ಭಾರತೀಯ ಪುರಾತತ್ವ ನಿರ್ದೇಶನಾಲಯದ ಶಾಸನ ಇಲಾಖೆ ಮತ್ತು ಕೆಲವು ವಿಶ್ವವಿದ್ಯಾಲಯಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಆಸಕ್ತಿ ವಹಿಸಿ ಕಾರ್ಯನಿರತವಾಗಿವೆ. 
										 ಪರಿಷ್ಕರಣೆ
									ಡಾ|| ಎಚ್.ಎಸ್.ಗೋಪಾಲ ರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ